



ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ಸಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ವಿಟ್ಲ, ಹಲವು ಹಿಂದು ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ ೪೦೦ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಅ.೯ರಂದು ಬೆಳಗ್ಗೆ ೧೦ಕ್ಕೆ ಹಿಂದು ಸಮಾಜದ ಬೃಹತ್ ಶಕ್ತಿ ಪ್ರದರ್ಶನ ಮಂಗಳಪದವಿನಲ್ಲಿ ನಡೆಯಲಿದೆ ಎಂದು ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ಸಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ವಿಟ್ಲ ಇದರ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಂಞಂತ್ತಿಮಾರ್ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ರೈತರಿಗೆ ಅನ್ಯಾಯ ಆಗುವ ಜತೆಗೆ ತುಳುನಾಡಿನ ದೈವ ದೇವರ ಪವಿತ್ರ ಸಾನಿಧ್ಯಗಳಿಗೆ ಹಾನಿಯಾಗುತ್ತಿದೆ. ದೈವಸ್ಥಾನ, ದೇವಸ್ಥಾನ, ನಾಗ ಬನ, ಮಸೀದಿ, ಚರ್ಚ್, ಶಾಲೆಗಳ ಮೇಲೆಯೇ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ. ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಮೇಲೆ, ಕಜಂಬು ಉತ್ಸವ ನಡೆಯುವ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಪ್ರಸರಣ ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಜನರ ಧಾರ್ಮಿಕ ಭಾವನೆ ದಕ್ಕೆಯಾಗುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ. ಉಡುಪಿಯಿಂದ ಕಾಸರಗೋಡಿಗೆ ಸಮುದ್ರ ಮೂಲಕ ಸುಮಾರು ೮೦ಕಿ.ಮೀ.ಯಲ್ಲಿ ವಿದ್ಯುತ್ ಮಾರ್ಗ ರಚನೆ ಮಾಡಬಹುದಿದ್ದು, ಇದಕ್ಕೆ ೧೪೪೦ಕೋಟಿ ಮಾತ್ರ ವೆಚ್ಚವಾಗಲಿದೆ. ಹೀಗೆ ಮಾಡುವುದರಿಂದ ಯಾರೊಬ್ಬರಿಗೂ ಸಮಸ್ಯೆಯೂ ಆಗುವುದಿಲ್ಲ. ಈ ಕಾರಣಕ್ಕೆ ಈಗಿನ ಯೋಜನೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳ ಪದವಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ಮಂಜುನಾಥ ಉಡುಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಆಬಳಿಕ ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ನಡೆಯಲಿದೆ ಎಂದರು.ಯುಕೆಟಿಸಿಎಲ್ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ರೋಹಿತಾಶ್ವ ಭಂಗ, ಸಂಜೀವ ಗೌಡ, ಧನುಕುಮಾರ್ ಉಪಸ್ಥಿತರಿದ್ದರು.








