


ಉಡುಪಿ: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್-ಅಪ್ ರಕ್ಷಿತಾ ಶೆಟ್ಟಿ ಅವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಉಡುಪಿಗೆ ಆಗಮಿಸಿದ ಹಿನ್ನೆಲೆ ಜನವರಿ 21ರಂದು ಕಾಪು ತಾಲೂಕಿನ ಹೆಜಮಾಡಿಯಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿತ್ತು.
ಹೆಜಮಾಡಿಯಿಂದ ಪಡುಬಿದ್ರಿವರೆಗೆ ತೆರೆದ ವಾಹನದಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ನೂರಾರು ಅಭಿಮಾನಿಗಳು ಜಯಕಾರ ಹಾಕುತ್ತಾ, ಪಟಾಕಿ ಸಿಡಿಸಿ ಹಾಗೂ ಹೂಮಳೆ ಸುರಿಸುವ ಮೂಲಕ ಬರಮಾಡಿಕೊಂಡರು. ಮೆರವಣಿಗೆಯುದ್ದಕ್ಕೂ ರಕ್ಷಿತಾ ಅವರು ಅಭಿಮಾನಿಗಳತ್ತ ಕೈಬೀಸುತ್ತಾ ಹರ್ಷ ವ್ಯಕ್ತಪಡಿಸಿದರು.
ಕರಾವಳಿಯ ರಕ್ಷಿತಾ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿದ್ದು, ಕರಾವಳಿ ಜನರೊಂದಿಗೆ ಅವರಿಗಿರುವ ಅವಿನಾಭಾವ ಸಂಬಂಧಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಮೆರವಣಿಗೆ ವೇಳೆ ರಕ್ಷಿತಾ ಶೆಟ್ಟಿ ಅವರು ಕೈಯಲ್ಲಿ ಬಂಗುಡೆ ಮೀನನ್ನು ಹಿಡಿದು ಅಭಿಮಾನಿಗಳೊಂದಿಗೆ ಸಂಭ್ರಮದಿ ಹೆಜ್ಜೆ ಹಾಕಿದರು. ಈ ವೇಳೆ ಮಾತನಾಡಿದ ಅವರು, “ಬಂಗುಡೆ ಮತ್ತು ಭೂತಾಯಿ ಮೀನಿನ ಖಾದ್ಯಗಳೆಂದರೆ ನನಗೆ ಪಂಚಪ್ರಾಣ” ಎಂದರು.
ಹೆಜಮಾಡಿಯಿಂದ ಪಡುಬಿದ್ರಿವರೆಗಿನ ರಸ್ತೆಯಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಸಂಗೀತ, ನೃತ್ಯ ಮತ್ತು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.








