


ವಿಟ್ಲ:ತುಳುನಾಡಿನ ಜನರ ಅಲೌಕಿಕ ದೈವಿಕ ಶಕ್ತಿಗಳ ಆರಾಧನೆಯಲ್ಲಿ ಅತ್ಯಂತ ಪ್ರಾಚೀನ ಮತ್ತು ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾದ ವಿಟ್ಲ ಎರಡು ಸಾವಿರ ಸೀಮೆಯ ವಿಟ್ಲ ಪಡ್ನೂರು ಗ್ರಾಮದ ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ ಮತ್ತು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಆಟಿ ಅಗೇಲು ಸೇವೆ ಆಗಸ್ಟ್ 16 ಭಾನುವಾರ ಜರುಗಲಿದೆ.
ಭಕ್ತಾದಿಗಳು 1 ಸೇರು ಅಕ್ಕಿ, 1 ತೆಂಗಿನಕಾಯಿ, 1 ಕೋಳಿ ಮತ್ತು ಬಾಳೆ ಎಲೆಗಳನ್ನು ಸಮರ್ಪಿಸಿ, ಇದನ್ನು ಸೂರ್ಯೋದಯಕ್ಕೆ ಅನ್ನದ ಕೊಪ್ಪರಿಗೆಯನ್ನು ಏರಿಸಿ ಕೋಳಿ ಬಂಟ ಮಾಡಿ ಅಡುಗೆಯನ್ನು ತಯಾರಿಸಿ, ದೈವಕ್ಕೆ ಪ್ರಸಾದವನ್ನು ಬಡಿಸಿ ಈ ಪ್ರಸಾದವನ್ನು ಭಕ್ತಾದಿಗಳಿಗೆ ಅಗೇಲು ರೂಪವಾಗಿ ಕೊಡುತ್ತಾರೆ. ಇದಕ್ಕೆ ಅಗೇಲು ಸೇವೆಯೆಂದು ಹೇಳುತ್ತಾರೆ. ಅನಾದಿಕಾಲದಿಂದಲೂ ಈ ಸೇವೆಯು ನಿರಂತರವಾಗಿ ವಿಜೃಂಭಣೆಯಿಂದ ನಡೆದುಬಂದಿದೆ.

ಈ ಪರ್ವದಿನದಂದು ದೈವಕ್ಕೆ ಅಗೇಲು ಕೊಟ್ಟಲ್ಲಿ ಭಕ್ತರ ಇಷ್ಟಾರ್ಥಗಳು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಈ ದಿನ ಕ್ಷೇತ್ರಕ್ಕೆ ಸಾವಿರಾರು ಕೋಳಿಗಳು ಹರಕೆ ರೂಪದಲ್ಲಿ ಬರುತ್ತವೆ.
ಪರಂಪರೆಯಂತೆ ದೈವಗಳ ಅಪ್ಪಣೆಯನ್ನು ಪಡೆದು ಅಗೇಲು ಸೇವೆಗೆ ಊರಿನ ಪ್ರತಿಯೊಂದು ಮನೆಯವರೂ ಸೇವಕರಾಗಿ ಬಂದು ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತದಾರರು ಮತ್ತು ಊರಿನ ಹತ್ತು ಸಮಸ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








