

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಮಾರ್ಗದರ್ಶನದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಘಟಕಕ್ಕೆ ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಚಾಲನೆ ನೀಡಿದರು.
ನೂತನ ಘಟಕದ ಕಾರ್ಯಾಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾದ್ಮನಾಭ ಸಪಲ್ಯ ಕೊಡೆಂಚರಪಾಲು, ಕೋಶಾಧಿಕಾರಿಯಾಗಿ ಮೋಹನ್ ಗುರ್ಜಿನಡ್ಕ, ಜತೆ ಕಾರ್ಯದರ್ಶಿಯಾಗಿ ವಿಶ್ವನಾಥ ಕುಲಾಲ ಮಿತ್ತೂರು, ಘಟಕದ ಇಡ್ಕಿದು ಗ್ರಾಮ ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಮ ಭಟ್ ನೆಡ್ಲೆ, ಕುಳ ಗ್ರಾಮ ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ ಕುಮಾರ್ ಶೆಟ್ಟಿ ಅಳಕೆ ಮಜಲು ಸರ್ವಾನುಮತದಿಂದ ಆಯ್ಕೆಯಾದರು.

ಇಡ್ಕಿದು ಗ್ರಾಮ ಪಂಚಾಯತ್ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಡ್ಕಿದು ಮತ್ತು ಕುಳ ಗ್ರಾಮದ ಪ್ರಮುಖರು ಸೇರಿ ಒಂದು ಭಿನ್ನವಾದ ಚಿಂತನೆ ಮಾಡಿದ್ದಾರೆ. ಇದರಿಂದಾಗಿ ಬಂಟ್ವಾಳ ತಾಲೂಕಿನಲ್ಲಿ ಪಂಚಾಯತ್ ವ್ಯಾಪ್ತಿಯ ಮೊದಲ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಇಡ್ಕಿದುವಿನಲ್ಲಿ ಹೆಜ್ಜೆಯಿಡಲಾರಂಭಿಸಿದೆ. ಸಂಕಲ್ಪ ಅಥವಾ ಆಲೋಚನೆಗಳು ದೃಢ ನಿರ್ಧಾರ ಮತ್ತು ಬದ್ಧತೆಯಿದ್ದಾಗ ಸಫಲವಾಗುತ್ತವೆ. ಇಡ್ಕಿದು ಗ್ರಾಮ ಪಂಚಾಯತ್ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತು ಅದರ ಚಟುವಟಿಕೆಗಳನ್ನು ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ಹಾಗೂ ವಿಶೇಷವಾಗಿ ಸಾಹಿತಿ ಮಿತ್ರರು ಬೆಂಬಲಿಸಬೇಕೆಂದು ವಿನಂತಿ ಮಾಡಿದರು. ಗಣೇಶ ಪ್ರಸಾದ ಪಾಂಡೇಲು ಗೌರವಾಧ್ಯಕ್ಷರಾಗಿಯೂ, ರಮೇಶ ಎಂ. ಬಾಯಾರು ಗೌರವ ಸಲಹೆಗಾರರಾಗಿಯೂ ಘಟಕಕ್ಕೆ ಸಹಕರಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಜೀವ ಮಿತ್ತಳಿಕೆ ಮುಖ್ಯೋಪಾಧ್ಯಾಯರು ಓಜಾಲ ಶಾಲೆ, ವಿಲ್ಮಾ ಸಿಕ್ವೇರ ಸ.ಶಿ. ಓಜಾಲ ಶಾಲೆ, ಸಂಜೀವ ಎನ್. ಸ.ಶಿ ಮಿತ್ತೂರು ಶಾಲೆ, ಲೀಲಾವತಿ ಗ್ರಂಥಾಲಯ ಸಹಾಯಕಿ ಇಡ್ಕಿದು, ಇಸ್ಮಾಯಿಲ್ ಮುಖ್ಯ ಶಿಕ್ಷಕರು ಅಳಕೆಮಜಲು ಕಿ.ಪ್ರಾ ಶಾಲೆ ಇವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯತ್ ಮಟ್ಟದ ಶಾಲಾ ಮುಖ್ಯಸ್ಥರು, ಇಡ್ಲಿದು ಗ್ರಾಮ ಪಂಚಾಯತ್‌ನ ಸದಸ್ಯರು ಖಾಯಂ ಆಹ್ವಾನಿತರಾಗಿರುತ್ತಾರೆ. ಘಟಕವು ಇನ್ನೂ ಹಲವು ಸಾಹಿತ್ಯಾಸಕ್ತರನ್ನು ಸದಸ್ಯರನ್ನಾಗಿ ಗುರುತಿಸಲಿದೆ ಎಂದು ನೂತನ ಕಾರ್ಯದರ್ಶಿ ಪದ್ಮನಾಭ ಸಪಲ್ಯ ಹೇಳಿದರು.
ವಿಲ್ಮಾ ಸಿಕ್ವೇರಾ ಕಾರ್ಯಕ್ರಮವನ್ನು ಸ್ವಾಗತಿಸಿ ಸಂಜೀವ ಎನ್. ವಂದಿಸಿದರು. ಶಿವರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.