ಡಾ. ಮೈತ್ರಿ ಭಟ್, ವಿಟ್ಲ

ಮನಸ್ಸು ನಮ್ಮ ವ್ಯಕ್ತಿತ್ವದ ಬಹು ಮುಖ್ಯ ಆಯಾಮ. ಇಡೀ ಜಗತ್ತು ಪ್ರತಿಫಲಿತವಾಗುವುದು ಮತ್ತು ನಾವು ಅದನ್ನು ಕಾಣುವ ಬಗೆ ನಿರ್ಧರಿತವಾಗುವುದು ಎರಡೂ ಮನಸ್ಸಿನಲ್ಲಿಯೇ. ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ನಿಲುಕುವುದು ಕೂಡಾ ನಮ್ಮ ಮನಸ್ಸಿನ ಮೂಲಕವೇ. ಆದುದರಿಂದ ಮಾನಸಿಕ ಆರೋಗ್ಯ ನಮ್ಮ ಬದುಕಿನ ಸಂತಸ, ನೆಮ್ಮದಿಗೆ ಬುನಾದಿ.ಮನುಷ್ಯನ ಮನಸ್ಸು-ದೇಹದ ಮಧ್ಯೆ ಒಂದು ಬಿಡಿಸಲಾಗದ ಕೊಂಡಿಯಿದೆ.
ಮನಸ್ಸು ನಿರ್ಮಲವಾಗಿದ್ದರೆ ದೇಹವೂ ನಿರ್ಮಲವಾಗಿರುತ್ತದೆ. ಆದುದರಿಂದ ಮನಸ್ಸನ್ನು ಸಿಟ್ಟು, ದ್ವೇಷ, ಅಸೂಯೆಗಳಂತಹ ಕಲ್ಮಶ ತುಂಬಿದ ಕಸದ ತೊಟ್ಟಿಯಾಗಿಸದೆ ಅದನ್ನು ಅನುಪಮವಾದ ಆಭರಣದ ಡಬ್ಬಿಯಾಗಿಸಿ ಅದರಲ್ಲಿ ಯಾವಾಗಲೂ ಪ್ರೀತಿ, ಆತ್ಮೀಯತೆ, ಸ್ವೀಕಾರ ಮನೋಭಾವ, ಶಾಂತಿ ಹಾಗೂ ಸೌಹಾರ್ದವೆಂಬ ಆಭರಣಗಳನ್ನು ತುಂಬಬೇಕು.ಯಾವುದಾದರೂ ಕೆಲಸ ಮಾಡುವ ಮೊದಲು ಸರಿಯಾಗಿ ಯೋಚಿಸಿ ಮಾಡುವುದರಿಂದ ಎಷ್ಟೋ ಸಮಸ್ಯೆಗಳನ್ನು ತಪ್ಪಿಸಿಕೊಂಡು ಆರೋಗ್ಯದಿಂದಿರಬಹುದು. ಇಲ್ಲವಾದಲ್ಲಿ, ಮಾಡಿಕೊಂಡ ತಪ್ಪುಗಳಿಂದಾಗಿ ನಮ್ಮ ಮನಸ್ಸಿನ ಆರೋಗ್ಯ ಹಾಳಾಗುತ್ತದೆ.
ಇಂದ್ರಿಯಗಳ ದಾಸನಾಗದೇ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡವನಿಗೆ ಸುಲಭವಾಗಿ ಅನಾರೋಗ್ಯ ಕಾಡಲು ಸಾಧ್ಯವಿಲ್ಲ. ಇಂದು ಬಹಳಷ್ಟು ಜನರು ಇಂದ್ರಿಯಗಳು ಬಯಸುವ ಕ್ಷಣಿಕಸುಖದ ಹಿಂದೆ ಬಿದ್ದು ಶಾಶ್ವತಸುಖವನ್ನು ಕಳೆದುಕೊಳ್ಳುತ್ತಿದ್ದಾರೆ. ಎಲ್ಲವೂ ತನಗೇ ಬೇಕೆಂಬ ಭಾವನೆಯಿಂದಲೇ ಇಂದು ಬಹಳಷ್ಟು ಜನರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಆಟೋ-ಇಮ್ಯೂನ್ ಕಾಯಿಲೆಗಳು ಸರ್ವೇ ಸಾಮಾನ್ಯವಾಗುತ್ತಿವೆ. ಕ್ಷಮಿಸುವ ಗುಣದಿಂದಾಗಿ ನಮ್ಮೆದುರಿನವರಿಗೆ ಅನುಕೂಲವಾಗುತ್ತದೆಯೋ ಇಲ್ಲವೋ ನಮ್ಮ ಮನಸ್ಸಂತೂ ಹಗುರವಾಗಿರುತ್ತದೆ. ಒಂದಿಂಚು ಜಾಗದ ಸಲುವಾಗಿ ಗುದ್ದಾಡಿ ಕೊನೆಗೆ ಒಂದಿಂಚೂ ಅಲುಗಾಡಲಾಗದಷ್ಟು ಕಾಯಿಲೆಗಳನ್ನು ತಂದುಕೊಳ್ಳುತ್ತೇವೆ. ನಾವು ದ್ವೇಷಭಾವನೆಯಲ್ಲಿದ್ದಾಗಲೇ ನಮ್ಮ ಜೀವಕೋಶಗಳೂ ಪರಸ್ಪರ ದ್ವೇಷಿಸಿ ದೊಡ್ಡ ದೊಡ್ಡ ಕಾಯಿಲೆಗಳಿಗೆ ಕಾರಣವಾಗುವುದು.ಬೇಕಾದದ್ದು ದೊರೆಯದಾದಾಗ, ದೊರೆತದ್ದು ದಕ್ಕದೇ ಹೋದಾಗ, ದೊರೆತದ್ದು ಜೊತೆಯಲ್ಲಿಯೇ ಉಳಿಯದೇ ಹೋದಾಗ ನೋವು ಸಹಜ.
ಆದರೆ ಕೆಲವೊಮ್ಮೆ ಮಾತಿನ, ಮೊಗದ ಮೇಲಣ ನಗೆಯ ಮೂಲಕ ಸಂತೋಷವು ಕೃತಕತೆಯ ವೇಷವನ್ನು ತೊಟ್ಟಾಗ ಅದನ್ನು ತೊಟ್ಟವರಿಗೂ ಪುರಸ್ಕರಿಸಿದವರಿಗೂ ನೋವೇ ಹೆಚ್ಚು. ದೈಹಿಕ ಗಟ್ಟಿತನದಂತೆ ಮಾನಸಿಕ ದೃಢತೆಯೂ ಸಾಧಿತವಾಗದಿದ್ದಲ್ಲಿ ಶಾಂತಿ, ಸಮಾಧಾನಗಳು ನಮ್ಮಿಂದ ದೂರವಾಗುತ್ತವೆ. ಸಮತೋಲನದಲ್ಲಿರುವ ತಕ್ಕಡಿಯು ಹೇಗೆ ವಸ್ತುವನ್ನು ಸರಿಯಾಗಿ ತೂಗಬಲ್ಲುದೋ ಅಂತೆಯೇ ಸಮತೋಲನದಲ್ಲಿರುವ ಮನಸ್ಸು ಮಾತ್ರ ಬದುಕಿನ ಮೌಲ್ಯಗಳನ್ನು ಸರಿಯಾಗಿ ಗ್ರಹಿಸಬಲ್ಲದು. ಬದುಕಿನ ಅನೇಕ ಬಯಕೆಗಳು ಮನಸ್ಸಿನಲ್ಲಿ ಪ್ರಚೋದನೆಗಳನ್ನು ಮೂಡಿಸಿ ಕಿರಿಕಿರಿಗೆ ಕಾರಣವಾಗುತ್ತವೆ. ಮನಸ್ಸಿನಲ್ಲಿ ಮೂಡುವ ರಾಗ–ದ್ವೇಷಗಳು ಮಾನಸಿಕ ಸಮತೋಲನವನ್ನು ಕೆಡಿಸುವುದರಿಂದ ಜೀವನದಲ್ಲಿ ಏರುಪೇರು ಸಹಜ. ಏನೇ ಆದರೂ ಇವೆಲ್ಲವನ್ನು ಜಯಿಸಿ ಮುನ್ನಡೆಯುವುದೇ ಬದುಕು.








