

ದೊಡ್ಡಬಳ್ಳಾಪುರ: ಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಹಂತಕರನ್ನು ಕೇವಲ 48 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಂತಕ ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದು, ಪೊಲೀಸರು ಕಾಲಿಗೆ ಗುಂಡು ಹಾರಿಸುವ ಮೂಲಕ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳಾದ ವಿನಯ್ ಮತ್ತು ತ್ರಿಮೂರ್ತಿ (ಅಪ್ಪಾಜಿ) ಬಂಧಿತರಾಗಿದ್ದಾರೆ. ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಹಳೇ ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿ ಆಗುತ್ತಿದ್ದವೇಳೆ ರೌಡಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಮೊನ್ನೆ (ಫೆ.17ರ) ಮಧ್ಯಾಹ್ನ ಕ್ರಿಕೆಟ್ ಪಂದ್ಯಾವಳಿ ವೇಳೆ ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ಇಬ್ಬರನ್ನು ಚಾಕು ಚುಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇನ್ನು ಕೊಲೆಯಾದವರನ್ನು ಭರತ್ ಮತ್ತು ಪ್ರತೀಕ್ ಎಂದು ಗುರುತಿಸಲಾಗಿತ್ತು.

ಆರೋಪಿಗಳು ರಾತ್ರಿ ವೇಳೆ ಸ್ನೇಹಿತರ ಬಳಿ ಹಣ ತೆಗೆದುಕೊಳ್ಳಲು ಬಂದಾಗ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹಂತರಕರನ್ನು ಬಂಧಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರು ಬಂಧಿಸಲು ಬಂದಾಗ ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದು, ಮಾರಕಾಸ್ತ್ರಗಳಿಂದ ಚುಚ್ಚಲು ಬಂದಿದ್ದಾರೆ. ಈ ವೇಳೆ ಪ್ರಾಣ ರಕ್ಷಣೆಗಾಗಿ ಪೊಲೀಸರು ಗಾಳಿಗೆ ಗುಂಡು ಹೊಡೆದು ಸೆರೆಯಾಗಲು ಮನವಿ ಮಾಡಿದ್ದಾರೆ. ಇದಕ್ಕೂ ಬಗ್ಗದೇ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದಾಗ ರೌಡಿಗಳ ಕಾಲಿಗೆ ಗುಂಡು ಹೊಡೆಯಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ:
ಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ 3.15ರ ಸುಮಾರಿನಲ್ಲಿ ನಡೆದಿತ್ತು. ಮೃತರನ್ನು ದೊಡ್ಡಬೆಳವಂಗಲ ಗ್ರಾಮದ ಪ್ರತೀಕ್(17) ಮತ್ತು ಭರತ್‌ಕುಮಾರ್(23) ಎಂದು ಗುರುತಿಸಲಾಗಿದೆ. ಪ್ರತೀಕ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಭರತ್‌ಕುಮಾರ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ ಎನ್ನಲಾಗಿದೆ. ಆದರೆ, ರೌಡಿಗಳು ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು.