

ಮಂಗಳೂರು: ಮಂಗಳೂರಿನಿ0ದ ಗುಜರಾತಿಗೆ ಒಯ್ಯುತ್ತಿದ್ದ ಎರಡು ಕೋಟಿ ಮೌಲ್ಯದ ಅಡಿಕೆಯೊಂದಿಗೆ ಚಾಲಕರು ಪರಾರಿಯಾದ ಘಟನೆ ನಡೆದಿದೆ. ಜುಲೈ 19 ಮತ್ತು 20ರಂದು ಎರಡು ಲಾರಿಗಳಲ್ಲಿ ಅಡಿಕೆಯನ್ನು ಗುಜರಾತಿನ ರಾಜಕೋಟ್ ಗೆ ಸಾಗಿಸಲಾಗಿದ್ದು, ಒಂದು ಲಾರಿಯಲ್ಲಿ 291 ಚೀಲ ಮತ್ತು ಇನ್ನೊಂದು ಲಾರಿಯಲ್ಲಿ 301 ಚೀಲ ಅಡಿಕೆ ಸಂಗ್ರಹ ಇದ್ದು ಜುಲೈ 24ರಂದು ಅಡಿಕೆ ಹೊಂದಿದ್ದ ಲಾರಿ ಗುಜರಾತ್ ತಲುಪಬೇಕಾಗಿತ್ತು. ಆದರೆ, ಲಾರಿ ಅಲ್ಲಿಗೆ ತಲುಪದೇ ಅದರ ಚಾಲಕರು ಅಡಿಕೆಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಲಾರಿ ಚಾಲಕರಾದ ಭವೇಶ್ ಕೆ. ಷಾ, ಆಶಿಷ್ ಯಾದವ್ ಮತ್ತು ಮಹಾರಾಷ್ಟ್ರದ ನಾಸಿಕ್ ನಲ್ಲಿ ಜೋಷಿ ಹೆಸರಲ್ಲಿ ಟ್ರಾನ್ಸ್ ಪೋರ್ಟ್ ಹೊಂದಿರುವ ಅದರ ಮಾಲೀಕ ವಿಜಯ್ ಜೋಷಿ ಈ ಮೂವರ ವಿರುದ್ಧ ಕೇಸು ದಾಖಲಾಗಿದೆ. ಮಂಗಳೂರು, ಭಟ್ಕಳ ಸೇರಿದಂತೆ ವಿವಿಧ ಕಡೆ ಕಚೇರಿಯನ್ನು ಹೊಂದಿರುವ ಸೌತ್ ಇಂಡಿಯಾ ಟ್ರಾನ್ಸ್ ಪೋರ್ಟ್ ಕಂಪನಿಯು ಅಡಿಕೆ ಸೇರಿದಂತೆ ವಿವಿಧ ಮಾದರಿಯ ತೋಟಗಾರಿಕೆ ಸಾಮಗ್ರಿಗಳನ್ನು ಖರೀದಿಸಿ ಬೇರೆ ಬೇರೆ ರಾಜ್ಯಗಳಿಗೆ ರವಾನಿಸುತ್ತದೆ. ಅದೇ ರೀತಿ ಅಡಿಕೆಯನ್ನು ಖರೀದಿಸಿ ಗುಜರಾತಿನ ರಾಜಕೋಟ್ ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್ ಪೋರ್ಟ್ ಕಚೇರಿಗೆ ಕಳುಹಿಸಿಕೊಟ್ಟಿತ್ತು.

ಇದಕ್ಕಾಗಿ ಬೋಳೂರಿನ ಜಯಲಕ್ಷ್ಮೀ ಟ್ರಾನ್ಸ್ ಪೋರ್ಟ್ ಬುಕ್ಕಿಂಗ್ ಕಚೇರಿಯಿಂದ ಲಾರಿ ಬಾಡಿಗೆ ಪಡೆಯಲಾಗಿತ್ತು. ಆದರೆ ಲಾರಿ ಸಿಗುವ ದಿನಾಂಕ ಜುಲೈ 24ಕ್ಕೆ ಅಲ್ಲಿಗೆ ತಲುಪದೇ ಅಡಿಕೆಯನ್ನು ಬೇರೆಡೆಗೆ ಒಯ್ದು ಕಳವು ಮಾಡಿರುವ ಸಂಶಯ ಬಂದಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

