Friday, April 19, 2024
spot_imgspot_img
spot_imgspot_img

ಪಶ್ಚಿಮಬಂಗಾಳ ಸೇರಿ ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ

- Advertisement -G L Acharya panikkar
- Advertisement -

ನವದೆಹಲಿ: ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ವಿಜ್ಞಾನ್‌ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌‌ ಆರೋರಾ, “ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮಾ.27ರಂದು, ಎರಡನೇ ಹಂತದ ಚುನಾವಣೆ ಎ.1ರಂದು, ಮೂರನೇ ಹಂತದ ಚುನಾವಣೆ ಎ.6ರಂದು, ಹಾಗೂ ಮತ ಎಣಿಕೆ ಮೇ 2 ರಂದು ನಡೆಯಲಿದೆ” ಎಂದು ತಿಳಿಸಿದ್ದಾರೆ.

ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಪ್ರಿಲ್ 6ರಂದು ಮತದಾನ ನಡೆಯಲಿದ್ದು, ಮೇ 2ಕ್ಕೆ ಮತ ಏಣಿಕೆ ನಡೆಯಲಿದೆ.

ಪಶ್ಚಿಮಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ 30 ಕ್ಷೇತ್ರಗಳಲ್ಲಿ ಮಾರ್ಚ್ 27 ರಂದು, ಎರಡನೇ ಹಂತದ ಮತದಾನ 30 ಕ್ಷೇತ್ರಗಳಲ್ಲಿ ಎಪ್ರಿಲ್‌ 1ರಂದು, ಮೂರನೇ ಹಂತದ ಮತದಾನ 31 ಕ್ಷೇತ್ರಗಳಲ್ಲಿ ಎಪ್ರಿಲ್‌ 6ರಂದು , ನಾಲ್ಕನೇ ಹಂತದ ಮತದಾನ 44 ಕ್ಷೇತ್ರಗಳಲ್ಲಿ ಎಪ್ರಿಲ್‌ 10ರಂದು , ಐದನೇ ಹಂತದ ಮತದಾನ 45 ಕ್ಷೇತ್ರಗಳಲ್ಲಿ ಎಪ್ರಿಲ್‌ 17ರಂದು, ಆರನೇ ಹಂತದ ಮತದಾನ 43 ಕ್ಷೇತ್ರಗಳಲ್ಲಿ ಎಪ್ರಿಲ್‌ 22ರಂದು, ಏಳನೇ ಹಂತದ ಮತದಾನ 36 ಕ್ಷೇತ್ರಗಳಲ್ಲಿ ಎಪ್ರಿಲ್‌ 26ರಂದು ಹಾಗೂ ಎಂಟನೇ ಹಂತದ ಮತದಾನ 35 ಕ್ಷೇತ್ರಗಳಲ್ಲಿ ಎಪ್ರಿಲ್‌ 29ರಂದು ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪಶ್ಚಿಮಬಂಗಾಳದಲ್ಲಿ 294, ಅಸ್ಸಾಂನಲ್ಲಿ 126 ಹಾಗೂ ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಕಣಕ್ಕಿಳಿದರೆ, ಡಿಎಂಕೆಯೊಂದಿಗೆ ಕಾಂಗ್ರೆಸ್‌ ಅಖಾಡಕ್ಕಿಳಿಯಲಿದೆ. ಅಲ್ಲದೆ, ಸ್ಟಾರ್‌ ನಟ ಕಮಲ್‌ ಹಾಸನ್‌ ಅವರ ಪಕ್ಷವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಕೂಡ ಚುನಾವಣಾ ಕಣದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.

ಕೇರಳದಲ್ಲಿ ಎಡಪಕ್ಷಗಳ ಎಲ್​ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಮಧ್ಯೆ ಹಣಾಹಣಿ ನಡೆಯಲಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿಯೂ ಕಣಕ್ಕೆ ಇಳಿದಿದೆ.

ರಾಜಕೀಯ ಹೈಡ್ರಾಮಕ್ಕೆ ವೇದಿಕೆಯಾಗಿದ್ದ ಪುದುಚೇರಿಯಲ್ಲಿ ಕಾಂಗ್ರೆಸ್‌ ಸರ್ಕಾರ ಪತನಗೊಂಡು, ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚೇನು ಪ್ರಭಾವ ಬೀರದ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸದಲ್ಲಿದೆ.

ಪಶ್ವಿಮ ಬಂಗಾಳದಲ್ಲಿ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಚುನಾವಣೆಗೆ ಗೆಲ್ಲಲು ಭಾರೀ ಸಿದ್ದತೆ ನಡೆಸುತ್ತಿರುವ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.

ಚುನಾವಣೆಯಲ್ಲಿ 18 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

“ಕೊರೊನಾ ಮಾರ್ಗಸೂಚಿಯಂತೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ” ಎಂದು ಆಯೋಗ ತಿಳಿಸಿದೆ. “ಅಭ್ಯರ್ಥಿಯೊಂದಿಗೆ ಇಬ್ಬರಿಗೆ ಮಾತ್ರ ತೆರಳಲು ಅವಕಾಶ, ಮನೆ, ಮನೆ ಪ್ರಚಾರಕ್ಕೆ ಕೇವಲ ಐವರಿಗೆ ಮಾತ್ರವೇ ಅವಕಾಶ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ಎರಡು ವಾಹನಗಳಲ್ಲಿ ಮಾತ್ರ ನಾಮಪತ್ರ ಸಲ್ಲಿಸಲು ಬರಬೇಕು, ಮತದಾರರ ಭದ್ರತೆಗೆ ಹೆಚ್ಚಿನ ಆದ್ಯತೆ, ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾದ ಎಸ್‌‌ಒಪಿ, ನಾಮಪತ್ರವನ್ನು ಆನ್‌ಲೈನ್‌ ಮೂಲಕವೂ ಸಲ್ಲಿಸಬಹುದು, ಮತದಾನದ ಅವಧಿ ಒಂದು ತಾಸಿಗೆ ಹೆಚ್ಚಿಸಲಾಗುವುದು, ಮತಗಟ್ಟೆಗಳ ಶೇ.50ರಷ್ಟು ಮತದಾನದ ದೃಶ್ಯ ನೇರ ಪ್ರಸಾರ, ನಾಮಪತ್ರವನ್ನು ಚುನಾವಣಾಧಿಕಾರಿಯ ಸಮ್ಮುಖದಲ್ಲೇ ಸಲ್ಲಿಸಬೇಕು, ರೋಡ್‌ ಶೋನಲ್ಲಿ ಐದು ವಾಹನಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುವುದು” ಎಂದು ಆಯೋಗ ಹೇಳಿದೆ.

- Advertisement -

Related news

error: Content is protected !!