

100 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ವಿಷಪ್ರಾಶನ ಮಾಡಿಸಿ ಹತ್ಯೆ ಮಾಡಿದ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತ ಗೌತಮ್ ಎಂಬುವರು ಈ ಬಗ್ಗೆ ದೂರು ಸಲ್ಲಿಕೆ ಮಾಡಿದ್ದಾರೆ. ಸಿದ್ದಿಪೇಟೆ ಜಿಲ್ಲೆಯ ಜಗದೇವಪುರ ಮಂಡಲದ ತಿಗುಲ್ ಗ್ರಾಮದಲ್ಲಿ ನಾಯಿಗಳ ಸಾಮೂಹಿಕ ಹತ್ಯೆ ನಡೆದಿದೆ ಎಂಬ ಆರೋಪವನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಗೌತಮ್ ಮಾಡಿದ್ದಾರೆ.
ಸರಪಂಚ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೃತ್ತಿಪರ ನಾಯಿ ಹಿಡಿಯುವವರನ್ನು ನೇಮಿಸಿ ಬೀದಿ ನಾಯಿಗಳಿಗೆ ಮಾ.27ರಂದು ವಿಷ ಚುಚ್ಚುಮದ್ದು ನೀಡಿ ಕೊಂದು ಹಾಕಿದ್ದಾರೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತ ತಾನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಕೂಡಾ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ನಾಯಿಗಳ ಶವಗಳು ಗುಂಡಿಯಲ್ಲಿ ಬಿದ್ದಿರುವುದನ್ನು ಕಂಡು ಬಂದಿದೆ. ಈ ಕುರಿತು ಸಿದ್ದಿಪೇಟೆ ಜಿಲ್ಲಾಧಿಕಾರಿ ಹಾಗೂ ಸಿದ್ದಿಪೇಟೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿಯನ್ನು ಅಮಾನತು ಮಾಡುವಂತೆ ಕೋರಿರುವುದಾಗಿ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಗೌತಮ್ ಹೇಳಿದ್ದಾರೆ.










