

ತಮ್ಮ ಅಧೀನ ಅಧಿಕಾರಿಗಳಿಗಾಗಿ ವ್ಯಕ್ತಿಯೊಬ್ಬರಿಂದ ಪರೋಕ್ಷವಾಗಿ ಲಂಚದ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿದ್ದ ಕರ್ನಾಟಕದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಈ ಪ್ರಕರಣವು 2023 ರಲ್ಲಿ ಪಿಎಸ್‌ಐ ಕೆ. ರಂಗಯ್ಯ ಮತ್ತು ಚಾಲಕ ಬಸವನಗೌಡ ಎಂಬವರ ನಡುವೆ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ.ಮೇ 26ರಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ನೊಂಗ್ಮೈಕಾಪಂ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು, “ದೂರುದಾರನಿಗೆ ‘ಇತರ ಪೊಲೀಸ್ ಅಧಿಕಾರಿಗಳಿಗಾಗಿ ಏನಾದರೂ ಮಾಡು’ ಅಥವಾ ‘ಆ ಹುಡುಗರನ್ನು ಖುಷಿಪಡಿಸು’ ಎಂದು ರಂಗಯ್ಯ ಸೂಚಿಸಿರುವುದು ಸ್ಪಷ್ಟವಾದ ಆರೋಪವಾಗಿದೆ. ಇದು ಅಧಿಕೃತವಾಗಿ ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಕಾನೂನುಬಾಹಿರ ಸಂಭಾವನೆ ಅಥವಾ ಅನಗತ್ಯ ಸೌಲಭ್ಯವನ್ನು ಕೊಡಿಸಲು ನಡೆಸಿದ ಪರೋಕ್ಷ ಲಂಚದ ಬೇಡಿಕೆಯಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.”ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಎಕ್ಸ್‌ಪ್ಲನೇಷನ್ 2 ರ ಶಾಸನಬದ್ಧ ನಿಬಂಧನೆಗಳ ಪ್ರಕಾರ, ಆರೋಪಿ ರಂಗಯ್ಯ ವೈಯಕ್ತಿಕವಾಗಿ ಯಾವುದೇ ಲಂಚದ ಹಣವನ್ನು ಪಡೆದಿಲ್ಲ ಅಥವಾ ಪಡೆಯುವ ಉದ್ದೇಶ ಹೊಂದಿರಲಿಲ್ಲ ಎಂಬ ಅಂಶವು ಆರಂಭಿಕ ಸಾಕ್ಷ್ಯಾಧಾರಗಳ ತನಿಖೆಯ ಹಂತದಲ್ಲಿ ಅಪರಾಧದ ಸ್ಥಾಪನೆಗೆ ಯಾವುದೇ ಅಡ್ಡಿಯಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಪೀಠ ಸ್ಪಷ್ಟಪಡಿಸಿದೆ.ಸಾರ್ವಜನಿಕ ಸೇವಕನು ತಾನೇ ಸ್ವತಃ ಅನಗತ್ಯ ಸೌಲಭ್ಯ ಅಥವಾ ಲಂಚವನ್ನು ಪಡೆದಾಗ ಅಥವಾ ಪಡೆಯಲು ಯತ್ನಿಸಿದಾಗ ಕಾಯ್ದೆಯ ಸೆಕ್ಷನ್ 7(ಎ) ಅನ್ವಯಿಸುತ್ತದೆ.

ಆದರೆ, ಸೆಕ್ಷನ್ 7ರ ಎಕ್ಸ್‌ಪ್ಲನೇಷನ್ 2(i) ಈ ಅಪರಾಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಇದರ ಲಾಭವನ್ನು ಸಾರ್ವಜನಿಕ ಸೇವಕನು ತನಗಷ್ಟೇ ಸೀಮಿತಗೊಳಿಸದೆ “ಇನ್ನೊಬ್ಬ ವ್ಯಕ್ತಿಗೂ” ಅನ್ವಯಿಸುವಂತೆ ಮಾಡಿದೆ.2024 ಜನವರಿ 23ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಪೀಠ, “ತಮ್ಮ ಅಧೀನ ಅಧಿಕಾರಿಗಳ (ಅವರೂ ಸಾರ್ವಜನಿಕ ಸೇವಕರು) ಮೂಲಕ ಲಂಚ ಪಡೆಯಲು ಯತ್ನಿಸುವುದು ಪರೋಕ್ಷ ಭ್ರಷ್ಟಾಚಾರದ ಒಂದು ರೂಪವಾಗಿದೆ. ಇಂತಹ ಭ್ರಷ್ಟಾಚಾರವನ್ನು ಕಾನೂನಿನ ವ್ಯಾಪ್ತಿಗೆ ತರಲು ಶಾಸಕಾಂಗವು ಸೆಕ್ಷನ್ 7ಕ್ಕೆ ಎಕ್ಸ್‌ಪ್ಲನೇಷನ್ 2 ಅನ್ನು ಸೇರಿಸಿದೆ” ಎಂದು ಹೇಳಿದೆ.ದೂರು ದಾಖಲಾಗಿದ್ದು ಹೇಗೆ? ಪ್ರಕರಣದ ಹಿನ್ನೆಲೆ2023 ಮಾರ್ಚ್ 15ರಂದು ನ್ಯಾಯಬೆಲೆ ಅಂಗಡಿಗಳ ಮೂಲಕ ಮಾರಾಟಕ್ಕೆ ಸಾಗಿಸಲಾಗುತ್ತಿದ್ದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಬಸವನಗೌಡ ಅವರ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಅನ್ನು ಪಿಎಸ್‌ಐ ರಂಗಯ್ಯ ವಶಪಡಿಸಿಕೊಂಡಿದ್ದರು. ಅವುಗಳನ್ನು ಬಿಡುಗಡೆ ಮಾಡುವಂತೆ ಬಸವನಗೌಡ ಹಲವು ಬಾರಿ ಮನವಿ ಮಾಡಿದರೂ ಹಿಂದಿರುಗಿಸಿರಲಿಲ್ಲ.

2023 ಜೂನ್ 1ರಂದು ಬಸವನಗೌಡ ಮತ್ತೊಮ್ಮೆ ತಮ್ಮ ವಸ್ತುಗಳನ್ನು ಬಿಡುಗಡೆ ಮಾಡುವಂತೆ ವಿನಂತಿಸಲು ಪೊಲೀಸ್ ಠಾಣೆಗೆ ಹೋದಾಗ, ರಂಗಯ್ಯ ಅವರು ಕಾನ್‌ಸ್ಟೆಬಲ್ ಕಾಶಿನಾಥ್ (ಆರೋಪಿ ನಂ.2) ಅವರನ್ನು ಕರೆದು ವಸ್ತುಗಳನ್ನು ಬಿಡುಗಡೆ ಮಾಡಲು ಸೂಚಿಸಿದರು.ಇದಾದ ಬೆನ್ನಲ್ಲೇ ರಂಗಯ್ಯ ಅವರು, ಬಸವನಗೌಡ ತನಗಾಗಿ ಏನೂ ಮಾಡಿಲ್ಲ ಎಂದು ಹೇಳಿ, “ನನ್ನ ಮೂವರು ಹುಡುಗರನ್ನು ಖುಷಿಪಡಿಸು” ಎಂದು ತಿಳಿಸಿದರು ಎನ್ನಲಾಗಿದೆ. ತದನಂತರ ಕಾನ್‌ಸ್ಟೆಬಲ್ ಕಾಶಿನಾಥ್ ರೂ 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ಚೌಕಾಸಿಯ ನಂತರ ರೂ 3,000ಕ್ಕೆ ಒಪ್ಪಂದವಾಗಿತ್ತು. ಮೇಲಧಿಕಾರಿಯ ಸೂಚನೆಗೂ ಮತ್ತು ಅವರ ಅಧೀನ ಅಧಿಕಾರಿ ನಂತರ ನಡೆಸಿದ ಲಂಚದ ಬೇಡಿಕೆಗೂ ನಡುವೆ ನೇರ ಸಂಪರ್ಕ ಇರುವುದನ್ನು ಈ ಘಟನಾವಳಿ ದೃಢಪಡಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.ಬಸವನಗೌಡ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತರು ಎರಡು ಬಾರಿ ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿದ್ದರು.‘
ಅಪಾಯಕಾರಿ ಲೋಪದೋಷ’ ಎಂದ ಲೋಕಾಯುಕ್ತ ಪೊಲೀಸ್ಪ್ರಕರಣದ ಎಫ್‌ಐಆರ್ ಹಂತದಲ್ಲೇ ಹೈಕೋರ್ಟ್ ತಪ್ಪು ಹಾದಿ ಹಿಡಿದು ‘ಮಿನಿ ಟ್ರಯಲ್’ ನಡೆಸಿದೆ ಎಂದು ಲೋಕಾಯುಕ್ತ ಪೊಲೀಸರು ವಾದಿಸಿದರು. ಸದ್ಯದ ಪರಿಸ್ಥಿತಿ ಮತ್ತು ಲಭ್ಯವಿರುವ ಸತ್ಯಾಸತ್ಯತೆಗಳು ರಂಗಯ್ಯ ವಿರುದ್ಧ ಆರಂಭಿಕ ತನಿಖೆಗಳಲ್ಲಿ ಬಲವಾದ ಸಾಕ್ಷ್ಯಗಳನ್ನು ಒದಗಿಸುತ್ತವೆ. ಆದರೆ, ರಂಗಯ್ಯ ತನಗಾಗಿ ಹಣದ ಬೇಡಿಕೆ ಇಟ್ಟಿಲ್ಲ ಎಂಬ ಕಾರಣಕ್ಕೆ ಲಂಚದ ಬೇಡಿಕೆಯ ಅಂಶವೇ ಅಲ್ಲಿಲ್ಲ ಎಂದು ಹೈಕೋರ್ಟ್ ತಪ್ಪಾಗಿ ತೀರ್ಮಾನಿಸಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.”ಒಂದು ವೇಳೆ ಹೈಕೋರ್ಟ್‌ನ ಇಂತಹ ಅರ್ಥೈಸುವಿಕೆಯನ್ನು ಎತ್ತಿಹಿಡಿದರೆ, ಅದು ಕಾನೂನಿನಲ್ಲಿ ಒಂದು ಅಪಾಯಕಾರಿ ಲೋಪದೋಷವನ್ನು ಸೃಷ್ಟಿಸಿದಂತಾಗುತ್ತದೆ. ಇದರಿಂದ ಹಿರಿಯ ಅಧಿಕಾರಿಗಳು ತಾವು ನೇರವಾಗಿ ಸಿಲುಕಿಕೊಳ್ಳದಂತೆ ಜಾಣತನ ಪ್ರದರ್ಶಿಸಿ, ತಮ್ಮ ಕೈಕೆಳಗಿನ ಸಿಬ್ಬಂದಿಗಳ ಮೂಲಕ ಕಾನೂನುಬಾಹಿರವಾಗಿ ಲಂಚ ವಸೂಲಿ ಮಾಡಲು ದಾರಿಕಲ್ಪಿಸಿದಂತಾಗುತ್ತದೆ.
ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಮೂಲ ಉದ್ದೇಶ ಮತ್ತು ಆಶಯವನ್ನೇ ಬುಡಮೇಲು ಮಾಡುತ್ತದೆ” ಎಂದು ಲೋಕಾಯುಕ್ತ ಪೊಲೀಸರು ವಾದಿಸಿದರು.ಇತ್ತ ಪೊಲೀಸರ ಮೇಲ್ಮನವಿಯನ್ನು ವಿರೋಧಿಸಿದ ರಂಗಯ್ಯ, ತಮಗೂ ಮತ್ತು ಬಸವನಗೌಡನಿಗೂ ಮೊದಲೇ ವೈಷಮ್ಯ ಇದ್ದಿದ್ದರಿಂದ ಈ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಲೋಕಾಯುಕ್ತರು ದಾಳಿ ನಡೆಸಿದ ಎರಡೂ ಸಂದರ್ಭಗಳಲ್ಲಿ ತಾವು ಸ್ಥಳದಲ್ಲಿ ಇರಲಿಲ್ಲ ಮತ್ತು ತಮ್ಮಿಂದ ಯಾವುದೇ ಹಣವನ್ನು ವಶಪಡಿಸಿಕೊಂಡಿಲ್ಲ ಎಂದು ರಂಗಯ್ಯ ಹೇಳಿದರು.
ಕಾಯ್ದೆಯ ಸೆಕ್ಷನ್ 7(ಎ) ಪ್ರಕಾರ ಲಂಚದ ಬೇಡಿಕೆ ಮತ್ತು ಅದನ್ನು ಸ್ವೀಕರಿಸಿರುವುದು ಎರಡೂ ಸಾಬೀತಾಗಬೇಕು, ಆದರೆ ಪ್ರಸ್ತುತ ದೂರಿನಲ್ಲಿ ಇವೆರಡೂ ಇಲ್ಲ. “ಕೇವಲ ಅಸ್ಪಷ್ಟ ಅಥವಾ ಸಾಂದರ್ಭಿಕ ಮಾತುಗಳನ್ನು ಕಾನೂನಿನಡಿಯಲ್ಲಿ ಲಂಚದ ಬೇಡಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ,” ಎಂದು ರಂಗಯ್ಯ ವಾದಿಸಿದ್ದಾರೆ.‘ಹೈಕೋರ್ಟ್ ವಾಸ್ತವವಾಗಿ ಕಿರು ವಿಚಾರಣೆ ನಡೆಸಿದೆ’ಮೇಲ್ಮನವಿದಾರರ ವಾದವನ್ನು ಒಪ್ಪಿದ ಸುಪ್ರೀಂ ಕೋರ್ಟ್ ಪೀಠವು ತನ್ನ ಆದೇಶದಲ್ಲಿ ಹೀಗೆ ಉಲ್ಲೇಖಿಸಿದೆ, “…ಎಫ್‌ಐಆರ್‌ನಲ್ಲಿರುವ ಅಂಶಗಳ ಆಧಾರದ ಮೇಲೆ ಆರಂಭಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪ್ರಕರಣ ದಾಖಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದಕ್ಕೆ ಮಾತ್ರ ಸೀಮಿತವಾಗುವ ಬದಲು, ಹೈಕೋರ್ಟ್ ಲೋಕಾಯುಕ್ತ ಟ್ರ್ಯಾಪ್ ಪ್ರಕ್ರಿಯೆಯ ಫಲಿತಾಂಶ, ಆರೋಪಿ ನಂ. 1 (ರಂಗಯ್ಯ) ಅವರಿಂದ ವೈಯಕ್ತಿಕವಾಗಿ ಹಣ ವಶವಾಗದೇ ಇರುವುದು, ಫೆನಾಲ್ಫ್ಥಲೀನ್ ಪರೀಕ್ಷೆಯ ಫಲಿತಾಂಶ ಮತ್ತು ಕೆಲವು ಆರೋಪಿಗಳ ವಿರುದ್ಧದ ಇಲಾಖಾ ತನಿಖೆಯ ವರದಿಯನ್ನು ಪರಿಶೀಲಿಸಲು ಮುಂದಾಗಿದೆ. ಇವೆಲ್ಲವೂ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿ ಮೌಲ್ಯಮಾಪನ ಮಾಡಬೇಕಾದ ಸಾಕ್ಷ್ಯಗಳಾಗಿವೆ.””ಇಷ್ಟು ವಿವರವಾದ ಪರಿಶೀಲನೆಗೆ ಕೈಹಾಕುವ ಮೂಲಕ ಹೈಕೋರ್ಟ್ ವಾಸ್ತವವಾಗಿ ಒಂದು ‘ಮಿನಿ ಟ್ರಯಲ್’ ನಡೆಸಿದೆ. ಇದು ಪ್ರಕರಣವನ್ನು ರದ್ದುಗೊಳಿಸುವ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವಾಗ ಪಾಲಿಸಬೇಕಾದ ಸ್ಥಾಪಿತ ಕಾನೂನು ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಹೇಳಿತು.ರೆಕಾರ್ಡ್ ಮಾಡಲಾದ ದೂರವಾಣಿ ಸಂಭಾಷಣೆಗಳು ಮತ್ತು ಆರೋಪಿ ರಂಗಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯಿಂದ ಲಂಚದ ಹಣವನ್ನು ವಶಪಡಿಸಿಕೊಂಡಿರುವುದು ಸೇರಿದಂತೆ ಈ ಪ್ರಕರಣದಲ್ಲಿರುವ ಸಾಂದರ್ಭಿಕ ಸಾಕ್ಷ್ಯಗಳನ್ನು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲೇ ಪರಿಶೀಲಿಸಬೇಕಾಗುತ್ತದೆ ಎಂದು ಪೀಠವು ಗಮನಿಸಿತು.ಅದೇ ರೀತಿ, ಈ ದೂರು ಯಾವುದಾದರೂ ಪೂರ್ವದ್ವೇಷದ ಹಿನ್ನೆಲೆಯಲ್ಲಿ ದಾಖಲಾಗಿದೆಯೇ ಅಥವಾ ಇಲ್ಲವೇ ಎಂಬುದು ಕೂಡ ಸಾಕ್ಷ್ಯಾಧಾರ ಮತ್ತು ವಿಚಾರಣೆಗೆ ಒಳಪಟ್ಟ ವಿಷಯವಾಗಿದೆ. “ಕೇವಲ ಹಳೆಯ ವೈಷಮ್ಯದ ಆರೋಪ ಇರುವುದರಿಂದಲೇ ಎಫ್‌ಐಆರ್‌ನಲ್ಲಿರುವ ಅಂಶಗಳು ನಂಬಲಸಾಧ್ಯ ಅಥವಾ ಸಂಪೂರ್ಣ ಸುಳ್ಳು ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸುವುದು ಸಮರ್ಥನೀಯವಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಹ ಆರೋಪಿಗಳ ವಿರುದ್ಧ ನಡೆದ ಇಲಾಖಾ ತನಿಖೆಯಲ್ಲಿ ಅವರು ದೋಷಮುಕ್ತರಾಗಿದ್ದಾರೆ ಎಂಬ ಕಾರಣಕ್ಕೆ, ಕ್ರಿಮಿನಲ್ ತನಿಖೆಯಲ್ಲಿ ಮುಖ್ಯ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.








