
ಕಡಬ: ಚಿನ್ನದ ಆಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆಯುವ ಉದ್ದೇಶದಿಂದ ಬಂದಿದ್ದರೆಂದು ಆರೋಪಿಸಿ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 3ರ ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು.
ಈ ವೇಳೆ ಅವರು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ.ಅವರ ವರ್ತನೆ ಸಂಶಯಾಸ್ಪದವಾಗಿದ್ದರಿಂದ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ, ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಅವರ ಬಳಿಯಿದ್ದ ಚಿನ್ನದ ಆಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲಾತಿ ನೀಡಲು ಸಾಧ್ಯವಾಗಿಲ್ಲ. ವಿಚಾರಣೆಯ ವೇಳೆ, ಆಭರಣಗಳನ್ನು ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್‌ನಲ್ಲಿ ಅಡವಿಟ್ಟು ಬ್ಯಾಂಕ್‌ಗೆ ಮೋಸ ಮಾಡಿ ಹಣ ಪಡೆಯುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಬಿಎನ್‌ಎಸ್-2023ರ ಕಲಂ 318(4) ಮತ್ತು 62 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.








