
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಚಿನ್ನ ಸಿ.ಎನ್. (ಚಿನ್ನಯ್ಯ) ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ, ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಲು 200 ಕೋಟಿ ರೂ. ವೆಚ್ಚದ ಬೃಹತ್ ಷಡ್ಯಂತ್ರ ನಡೆದಿತ್ತು ಎಂದು ಆರೋಪಿಸಿದ್ದಾನೆ.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಮೂಲಕ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ರಾಜ್ಯ ಸರ್ಕಾರ ಹಾಗೂ ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿದ್ದು, ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಲಾಗಿದೆ.ಚಿನ್ನಯ್ಯ ತನ್ನ ಅರ್ಜಿಯಲ್ಲಿ, “ನಾನು ಒತ್ತಾಯಪೂರ್ವಕವಾಗಿ ಈ ಪ್ರಕರಣಕ್ಕೆ ಸಿಲುಕಿಸಲ್ಪಟ್ಟಿದ್ದೇನೆ. ಅಸಲಿ ಸೂತ್ರಧಾರರು ಹೊರಗಿದ್ದಾರೆ, ಆದರೆ ಜೈಲಿಗೆ ಹೋದವನು ನಾನೊಬ್ಬನೇ” ಎಂದು ಆರೋಪಿಸಿದ್ದಾನೆ.ಅರ್ಜಿಯಲ್ಲಿ 200 ಕೋಟಿ ರೂ. ಬಜೆಟ್, ಕೇರಳದಿಂದ ಹಣ ಬಂದಿರುವ ಆರೋಪ, ಚಿತ್ರದುರ್ಗದ ರಮಾ ನಾಗರಾಜ್ ಅವರಿಂದ ಹಣ ವರ್ಗಾವಣೆ ಹಾಗೂ ನಗದು ವಹಿವಾಟಿನ ವಿವರಗಳನ್ನು ಉಲ್ಲೇಖಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ 50 ಲಕ್ಷ ರೂ. ಆಮಿಷ ಒಡ್ಡಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದಾನೆ.ಅಲ್ಲದೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ವಿಠಲಗೌಡ, ಜಯಂತ್ ಸೇರಿದಂತೆ ಹಲವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ ಹಾಗೂ ಅಜಯ್ ಅಂಚನ್ ಮೊದಲೇ 30-35 ವೀಡಿಯೋಗಳನ್ನು ಸಿದ್ಧಪಡಿಸಿದ್ದರು ಎಂದು ಆರೋಪಿಸಲಾಗಿದೆ.ನಟ ಪ್ರಕಾಶ್ ರಾಜ್ ಅವರ ಹೆಸರೂ ಅರ್ಜಿಯಲ್ಲಿ ಉಲ್ಲೇಖವಾಗಿದ್ದು, ಗಿರೀಶ್ ಮಟ್ಟೆಣ್ಣವರ್ ಹೇಳಿದಂತೆ ಹೇಳಿಕೆ ನೀಡುವಂತೆ ಅವರು ತಿಳಿಸಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದಾನೆ.ತನ್ನನ್ನು ಚಾಕು ತೋರಿಸಿ ಬೆದರಿಕೆ ಹಾಕಲಾಗಿತ್ತು, ಪತ್ನಿಗೆ ಬೆದರಿಕೆ ಹಾಕಿದ್ದರು, ಬಲವಂತವಾಗಿ ಸಹಿ ಮಾಡಿಸಿಕೊಂಡರು, ಹೇಳಿಕೆ ನೀಡಲು ತರಬೇತಿ ನೀಡಲಾಗಿತ್ತು ಹಾಗೂ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂದು ಚಿನ್ನಯ್ಯ ಅರ್ಜಿಯಲ್ಲಿ ಆರೋಪಿಸಿದ್ದಾನೆ.
ಈ ಆರೋಪಗಳ ಕುರಿತು ಎಸ್‌ಐಟಿ ಯಾವ ವರದಿ ಸಲ್ಲಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದ್ದು, ಜೂನ್ 29ರ ವಿಚಾರಣೆ ಮಹತ್ವ ಪಡೆದಿದೆ.








