Wednesday, July 1, 2026
spot_imgspot_img
spot_imgspot_img

ಕಂಕನಾಡಿ: ಭಾರಿ ಮಳೆಗೆ ಕಾಂಪೌಂಡ್ ಗೋಡೆ ಕುಸಿತ: ಇಬ್ಬರು ಬಾಲಕಿಯರು ಸೇರಿ ಮೂವರು ಸಾವಿನ ಶಂಕೆ

- Advertisement -
- Advertisement -

ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರೋಡಿಯ ಮರಿಯಾಲ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸುರಿದ ಭಾರಿ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ಬಾಡಿಗೆ ಮನೆಗಳ ಮೇಲೆ ಬಿದ್ದ ಪರಿಣಾಮ ದುರಂತ ಸಂಭವಿಸಿದೆ.

ಘಟನೆಯಲ್ಲಿ ಇಬ್ಬರು ಬಾಲಕಿಯರು ಹಾಗೂ ಮಹಿಳೆಯೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಹಲವರನ್ನು ರಕ್ಷಿಸಲಾಗಿದೆ.ಬೆಳಿಗ್ಗೆ ಸುಮಾರು 4.45 ರಿಂದ 5.00 ಗಂಟೆಯ ವೇಳೆಗೆ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಅದರ ಕೆಳಭಾಗದಲ್ಲಿದ್ದ ನಾಲ್ಕು ಬಾಡಿಗೆ ಮನೆಗಳ ಹಿಂಭಾಗದ ಗೋಡೆಗಳಿಗೆ ಹಾನಿಯಾಗಿದೆ. ಈ ಪೈಕಿ ಎರಡು ಕುಟುಂಬಗಳು ತೀವ್ರವಾಗಿ ಪರಿಣಾಮಕ್ಕೊಳಗಾಗಿವೆ.ಬಿಹಾರ ಮೂಲದ ಲಾಲ್‌ಬಾಬು (37), ಪತ್ನಿ ಇಂದು (34) ಹಾಗೂ ಅವರ ನಾಲ್ವರು ಪುತ್ರಿಯರಾದ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಮತ್ತು ತನು (3) ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಲಾಲ್‌ಬಾಬು, ಇಂದು ಹಾಗೂ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಬಾಲಕಿಯರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಇನ್ನೊಂದು ಮನೆಯಲ್ಲಿ ಉಡುಪಿ ಮೂಲದ ಬಾಲಕೃಷ್ಣ (40) ಹಾಗೂ ಅವರ ಪತ್ನಿ ಶಾಂತಾ (35) ಕಳೆದ ಎಂಟು ತಿಂಗಳಿಂದ ವಾಸವಾಗಿದ್ದರು.

ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಶಾಂತಾ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಗಾಯಾಳುಗಳು ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ತಕ್ಷಣ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಮೃತಪಟ್ಟಿರುವ ಬಗ್ಗೆ ಅಧಿಕೃತ ದೃಢೀಕರಣ ಇನ್ನಷ್ಟೇ ಲಭ್ಯವಾಗಬೇಕಿದೆ.ಸ್ಥಳಕ್ಕೆ ಕಂಕನಾಡಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಭಾರಿ ಮಳೆಯಿಂದ ಸಂಭವಿಸಿದ ಈ ದುರಂತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

- Advertisement -

Related news

error: Content is protected !!