




ಶಿವಮೊಗ್ಗ : ಶಾಲೆಯಿಂದ ಬರುತ್ತಿದ್ದ ಅಣ್ಣನನ್ನು ಬರಮಾಡಿಕೊಳ್ಳಲು ಹೋದ ಒಂದುವರೆ ವರ್ಷದ ಪುಟ್ಟ ಮಗು ಅದೇ ಶಾಲಾ ಬಸ್‌ಗೆ ಬಲಿಯಾದ ಘಟನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ.
ಗೋಪಾಲಗೌಡ ಬಡಾವಣೆಯ ನಿವಾಸಿ, ಮಂಜುನಾಥ್ ಎಂಬವರ ಪುತ್ರ ಆರ್ಯನ್ ಮೃತ ಮಗು.
ಮಂಜುನಾಥ್ ಹಿರಿಯ ಮಗ ಆರುಷ್ ನಗರದ ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ನಿನ್ನೆ(ಎ.01) ಮಧ್ಯಾಹ್ನ ಶಾಲಾ ಬಸ್‌ನಲ್ಲಿ ಆರುಷ್ ಮನೆಗೆ ಬರುವವನಿದ್ದ. ಮನೆಯ ಕೆಲಸದಾಕೆ ಆಶಾ, ಆರುಷ್‌ನನ್ನು ಬಸ್ಸಿನಿಂದ ಇಳಿಸಿ ಮನೆಗೆ ಕರೆತರಲು ಬಸ್ಸಿನ ಬಳಿ ತೆರಳಿದ್ದರು. ಈ ವೇಳೆ ಮನೆಯೊಳಗೆ ಆಟವಾಡುತ್ತಿದ್ದ ಆರ್ಯನ್ ಆಶಾ ಹಿಂದೆಯೇ ರಸ್ತೆಗೆ ಬಂದಿದ್ದು, ಈ ವಿಚಾರ ಯಾರಿಗೂ ತಿಳಿದಿರಲಿಲ್ಲ.
ಬಸ್ಸಿನಿಂದ ಆರುಷ್‌ನನ್ನು ಕೆಳಗಿಳಿಸುವಲ್ಲಿ ಆಶಾ ನಿರತರಾಗಿದ್ದಾಗ, ಇತ್ತ ಆರ್ಯನ್ ಬಸ್ಸಿನ ಮುಂಭಾಗದಿಂದ ರಸ್ತೆ ದಾಟಲು ಪ್ರಯತ್ನಿಸಿದ್ದಾನೆ. ಆದರೆ, ಬಸ್ ಚಾಲಕ ಉಮೇಶ್ ಮಗು ಮುಂಭಾಗದಲ್ಲಿ ಇರುವುದನ್ನು ಗಮನಿಸದೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಸ್ ಮಗುವಿಗೆ ಡಿಕ್ಕಿಯಾಗಿದ್ದು, ತೀವ್ರ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ದೌಡಾಯಿಸಿದ್ದಾರೆ, ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ವರದಿ ಮೂಲಕ ತಿಳಿದುಬಂದಿದೆ.








