ರಾಮ ರಾಜ್ಯದ ಆದರ್ಶ ಪುನಃ ಸ್ಥಾಪಿಸಲು ಧರ್ಮಾಚರಣೆ ಅವಶ್ಯ – ಪೂಜ್ಯ ರಮಾನಂದ ಗೌಡ ಸನಾತನ ಸಂಸ್ಥೆ




ವಿಟ್ಲ: ಹಿಂದೂ ಧರ್ಮ ಪ್ರೇಮಿಗಳ ಸಭೆಯು ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸಂಪನ್ನವಾಯಿತು.

ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ ಇವರು ಮಾತನಾಡಿ ಹಿಂದೂಗಳಾದ ನಾವು ನಮ್ಮ ಸಂಸ್ಕೃತಿಯನ್ನು ಸಂಪೂರ್ಣ ಮರೆಯುತ್ತಿದ್ದೇವೆ. “ಧರ್ಮೋ ರಕ್ಷತಿ ರಕ್ಷಿತಃ” ಎಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ ಎಂದರ್ಥ. ಯಾರು ಧರ್ಮಾಚರಣೆ ಮಾಡುತ್ತಾರೋ, ಧರ್ಮದ ಮೇಲೆ ಶ್ರದ್ಧೆ ಇಡುತ್ತಾರೋ ಅವರ ರಕ್ಷಣೆಯನ್ನು ಈಶ್ವರ ಮಾಡುತ್ತಾನೆ. ‘ಹೀನಾನಿ ಗುಣಾನಿ ದೂಷಯತಿ ಇತಿ ಹಿಂದು’ ಯಾರು ಹೀನವಾಗಿರುವ ಕೆಟ್ಟ ದೋಷಗಳನ್ನು ಕಡಿಮೆ ಮಾಡಿ ಒಳ್ಳೆಯ ಗುಣವನ್ನು ಜೀವನದಲ್ಲಿ ಅಳವಡಿಸುತ್ತಾನೆಯೋ ಅವನು ಹಿಂದುವಾಗಿರುತ್ತಾನೆ. ಅಂತಹ ಹಿಂದೂಗಳ ಸಮೂಹವೇ ಹಿಂದೂ ರಾಷ್ಟ್ರವಾಗಿರುತ್ತದೆ. ರಾಮ ರಾಜ್ಯದ ಆದರ್ಶ ಪುನಃ ಸ್ಥಾಪಿಸಲು ಪೂಜ್ಯ ಶ್ರೀ ರಮಾನಂದ ಗೌಡ ಇವರು ಉಪಸ್ಥಿತರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಚಂದ್ರು ಮೊಗೇರ ಮಾತಾಡಿ ಹಿಂದುಗಳಿಗೆ 300 ವರ್ಷಗಳಿಂದ ಸರಿಯಾದ ಧರ್ಮ ಶಿಕ್ಷಣ ಸಿಗದ ಕಾರಣ, ಹಿಂದೂಗಳು ಪಾಶ್ಚಾತ್ಯ ಅಂಧಾನುಕರಣೆಯಿಂದ ಹಿಂದೂ ಧರ್ಮದ ಆಚರಣೆಯನ್ನು ಮರೆತಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣ ಕೊಡಲು ಅವಕಾಶವಿಲ್ಲ. ಆದರೆ ಅನ್ಯ ಧರ್ಮೀಯರಿಗೆ ಧರ್ಮ ಶಿಕ್ಷಣ ನೀಡುವ ಸೌಲಭ್ಯವಿದೆ. ಇದು ಜಾತ್ಯತೀತ ರಾಷ್ಟ್ರವೇ? ಅದೇ ರೀತಿ ನಮ್ಮ ಧರ್ಮದ ಲಕ್ಷಾಂತರ ದೇವಸ್ಥಾನದ ಸರಕಾರಿಕರಣ ಮಾಡಿದ್ದಾರೆ. ಆದರೆ ಯಾವುದೇ ಒಂದು ಚರ್ಚ್ ,ಮಸೀದಿ ಸರಕಾರಿಕರಣ ಆಗಲಿಲ್ಲ. ಇದು ಜಾತ್ಯಾತೀತ ರಾಷ್ಟ್ರವೇ? ನಾವು ಯೋಚಿಸಿ ಕೃತಿ ಮಾಡುವ ಸಮಯ ಬಂದಿದೆ. ಹಿಂದುಗಳಿಗೆ ನಿಜವಾದ ನ್ಯಾಯ ಸಿಗಬೇಕಾದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಅವಶ್ಯ ಎಂದು ಹಿಂದೂ ಬಾಂಧವರ ಮನಮುಟ್ಟುವಂತೆ ತಿಳಿಸಿದರು.
ಸಭೆಯಲ್ಲಿ ಧರ್ಮಪ್ರೀಮಿಗಳಾದ ಶ್ರೀ ರಾಜಶೇಖರ್ ಶೆಟ್ಟಿ ಕುಡ್ತಮುಗೇರು, ಶ್ರೀ ಗೋಪಾಲ್ ವಿಟ್ಲ, ಶ್ರೀ ಬಾಲಚಂದ್ರ ಸೊರಕೆ, ಸಂಜೀವ ಪೂಜಾರಿ ವಿಟ್ಲ, ಚೇತನ್ ಚಂದಳಿಕೆ,ಉದ್ಯಮಿ ಶ್ರೀ ನಾಗೇಶ ಇನ್ನಿತರರು ಉಪಸ್ಥಿತರಿದ್ದರು.









