ಕೊಚ್ಚಿ: ಕೊಲ್ಲಂ ಕರಾವಳಿ ತೀರದ ಬಳಿ ಮೀನುಗಾರಿಕೆ ದೋಣಿಯೊಂದು ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ, ಸಮುದ್ರದಲ್ಲಿ ಮುಳುಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ದೋಣಿಯ ಇಬ್ಬರು ಸಿಬ್ಬಂದಿಗಳು ನಾಪತ್ತೆಯಾಗಿದ್ದು, ಉಳಿದ 9 ಮಂದಿಯನ್ನು ಹಡಗಿನ ಸಿಬ್ಬಂದಿ ರಕ್ಷಿಸಿದ್ದಾರೆ.ಮೀನುಗಾರಿಕೆ ದೋಣಿಯನ್ನು ಸೇಂಟ್ ಜೋಸೆಫ್ ಎಂದು ಗುರುತಿಸಲಾಗಿದ್ದು, ಈ ದೋಣಿಯಲ್ಲಿ 11 ಮಂದಿ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.

ಈ ಪೈಕಿ ಎಲ್ಲರೂ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ.ಶುಕ್ರವಾರ ರಾತ್ರಿ ಕೊಲ್ಲಂನಲ್ಲಿರುವ ಶಕ್ತಿಕುಲಂಗರ ಬಂದರನ್ನು ಈ ದೋಣಿ ಬಿಟ್ಟಿತ್ತು ಎಂದು ಹೇಳಲಾಗಿದೆ.ಶನಿವಾರ ಈ ಅಪಘಾತ ಸಂಭವಿಸಿದ್ದು, ಕರಾವಳಿಯಿಂದ 120 ನಾಟಿಕಲ್ ಮೈಲು ದೂರದಲ್ಲಿ ವಿದೇಶಿ ಹಡಗೊಂದಕ್ಕೆ ಈ ದೋಣಿ ಡಿಕ್ಕಿ ಹೊಡೆದಿದೆ.

ಈ ಡಿಕ್ಕಿಯಿಂದ ದೋಣಿಗೆ ತೀವ್ರ ಹಾನಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಮುಳುಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಘಟನೆಯ ಬೆನ್ನಿಗೇ, ದೋಣಿಯಲ್ಲಿದ್ದ ಒಂಬತ್ತು ಸಿಬ್ಬಂದಿಗಳನ್ನು ಅಪಘಾತಕ್ಕೀಡಾದ ಹಡಗಿನ ಸಿಬ್ಬಂದಿಗಳು ರಕ್ಷಿಸಿದ್ದು, ಉಳಿದಿಬ್ಬರು ಸಿಬ್ಬಂದಿಗಳನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ.ರಕ್ಷಿಸಲಾಗಿರುವ ಮೀನುಗಾರರನ್ನು ಕೊಚ್ಚಿ ಅಥವಾ ತಿರುವನಂತಪುರಂನಲ್ಲಿನ ವಿಳಿಂಜಂಗೆ ಶೀಘ್ರವೇ ಕರೆ ತರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.ದೋಣಿಯ ಸಿಬ್ಬಂದಿಗಳ ಹೇಳಿಕೆಗಳನ್ನು ಪಡೆದ ಬಳಿಕ, ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.









