


ಉಳ್ಳಾಲ: ಕಳೆದ ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಕೆರೆಯಲ್ಲಿ ಪತ್ತೆಯಾಗಿದೆ. ಪತ್ನಿಯಿಂದ ವಿಚ್ಚೇದನಗೊಂಡ ಖಿನ್ನತೆಯಲ್ಲಿ ಯುವಕ ಆತಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ವಿವೇಕ್ ಶೆಟ್ಟಿಗಾರ್(32) ಮೃತರು.
ಮಂಗಳೂರಿನ ಕದ್ರಿಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದ ಅವರು ಮಧ್ಯರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ ಬಾರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು ವಿವೇಕ್ ಕರೆಯನ್ನು ಸ್ವೀಕರಿಸಿರಲಿಲ್ಲ.
ವಿವೇಕ್ ಮಂಗಳವಾರವೂ ಮನೆಗೆ ಬಾರದೆ, ಮೊಬೈಲ್ ಕರೆಯನ್ನು ಸ್ವೀಕರಿಸದೆ ಇದ್ದಾಗ ಗಾಬರಿಗೊಂಡ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದು, ನಂತರ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವೇಕ್ ಅವರ ದ್ವಿಚಕ್ರ ವಾಹನದ ಜತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಪತ್ತೆಯಾಗಿದ್ದವು.
ಮೃತ ವಿವೇಕ್ ವಿವಾಹಿತನಾಗಿದ್ದು ಪತ್ನಿ ಆತನಿಂದ ವಿಚ್ಚೇದನ ಪಡೆದು ಕೆಲ ದಿನಗಳ ಹಿಂದೆಯಷ್ಟೇ ಬೇರೆ ಮದುವೆಯಾಗಿದ್ದಳಂತೆ. ಇದೇ ವಿಚಾರದಲ್ಲಿ ವಿವೇಕ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರ ಬಹುದೆಂದು ಶಂಕಿಸಲಾಗಿದೆ. ಮೃತ ವಿವೇಕ್ ತಂದೆ, ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ..








