


ಹುಬ್ಬಳ್ಳಿ: ನೀರಿನ ಗುಂಡಿಯಲ್ಲಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.
ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್ ಮೈದಾನದಲ್ಲಿದ್ದ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರುವುದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








