
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಮತ್ತದರ ಸಂಬಂಧ ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿರುವ ಆರೋಪಪಟ್ಟಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಿಂಪಡೆದಿದ್ದಾರೆ.


ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಮೈಸೂರು ಜಿಲ್ಲೆಯ ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದು ಕೋರಿ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರೇವಣ್ಣ ಪರ ವಕೀಲ ಬಿ.ಎಂ. ಗಿರೀಶ್ ಕುಮಾರ್ ಸಲ್ಲಿಸಿದ್ದ ಮೆಮೊ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಹಿಂಪಡೆಯುವ ಸಂಬಂಧ ಸಲ್ಲಿಸಲಾದ ಮೆಮೊ ಪರಿಗಣಿಸಿ, ಅರ್ಜಿಯನ್ನು ಹಿಂಪಡೆಯಲು ಅನುಮತಿಸಲಾಗಿದೆ. ಕಾನೂನಿನ ಅನ್ವಯ ಆಕ್ಷೇಪಾರ್ಹವಾದ ಆದೇಶದ ಕುರಿತು ಕ್ರಮಕೈಗೊಳ್ಳುವ ಸ್ವಾತಂತ್ರ್ಯ ಅರ್ಜಿದಾರರಿಗಿದ್ದು, ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.ರೇವಣ್ಣ ವಿರುದ್ಧ ಆರೋಪ ನಿಗದಿಪಡಿಸದಂತೆ 2025ರ ಜನವರಿ 17ರಂದು ವಿಚಾರಣಾ ನ್ಯಾಯಾಲಯವನ್ನು ನಿರ್ಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

ಆನಂತರ, ರೇವಣ್ಣ ಅವರ ಪರ ವಕೀಲರು ಹಲವು ಬಾರಿ ವಿನಾ ಕಾರಣ ವಿಚಾರಣೆ ಮುಂದೂಡಿಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ 2026ರ ಫೆಬ್ರವರಿ 5ರಂದು ಹೈಕೋರ್ಟ್ ಮಧ್ಯಂತರ ಆದೇಶ ತೆರವುಗೊಳಿಸಿತ್ತು. ಇದೀಗ, ರೇವಣ್ಣ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ.








