ಬೆಂಗಳೂರು, ಮೇ 4: ಮಗಳ ಹಿಂದೆ ಬಿದ್ದಿದ್ದ ಯುವಕನ ಹತ್ಯೆಗೈದ ಪ್ರಕರಣ ಸಂಬಂಧ ಆಕೆಯ ತಂದೆ ಸಹಿತ ನಾಲ್ವರು ಆರೋಪಿಗಳನ್ನು ಇಲ್ಲಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಮೇಶ್(26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಹತ್ಯೆಯ ಬಳಿಕ ಮೃತದೇಹವನ್ನು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಯುವತಿಯ ತಂದೆ ಈರಯ್ಯ(44), ಸಂಬಂಧಿಕರಾದ ಚಿನ್ನಯ್ಯ(29), ಚೇತನ್ ಮಾದರ(26), ವಿನಾಯಕ(19) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಇತ್ತೀಚೆಗೆ ಅಲ್ಲಾಳಸಂದ್ರದ ಬಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೆವು. ಅದಾದ ನಂತರ ನಮಗೆ ಕೊಲೆ ಆಗಿದೆ ಎಂಬುರ ಗೊತ್ತಾಯಿತು ಎಂದು ಮಾಹಿತಿ ನೀಡಿದರು ಮೃತ ವ್ಯಕ್ತಿಯ ಹೆಸರು ರಮೇಶ್, ಮೂಲತಃ ಇವನು ಬಾಗಲಕೋಟೆ ಜಿಲ್ಲೆಯವನು. ಡೆಲಿವರಿ ಕೆಲಸ ಮಾಡಿಕೊಂಡು ಇರಬಹುದು ಎಂದುಕೊಂಡು ಬೆಂಗಳೂರಿಗೆ 15-20 ದಿನಗಳ ಮುಂಚೆ ಬಂದಿದ್ದ. ಇವನು ಮೂರು ವರ್ಷದ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ. ನಂತರ 2024ರಲ್ಲಿ ಬೇರೆಯವರಿಗೆ ಬೆದರಿಸಿದ್ದಕ್ಕೆ ಇನ್ನೊಂದು ಪ್ರಕರಣ ದಾಖಲಾಗಿರುತ್ತದೆ.
ಬೆಂಗಳೂರಿಗೆ ಬಂದ ಮೇಲೂ ಮತ್ತೆ ಅದೇ ಪ್ರವೃತ್ತಿಯನ್ನು ಶುರು ಮಾಡಿಕೊಳ್ಳುತ್ತಾನೆ ಎಂದು ಜಿ.ಕೆ.ಮಿಥುನ್ ಕುಮಾರ್ ಹೇಳಿದರು.ರಮೇಶ್ ಕೆಲವು ದಿನಗಳಿಂದ ಈರಯ್ಯನ ಮಗಳನ್ನು ಮದುವೆ ಮಾಡಿಕೊಡುವಂತೆ ಪೀಡಿಸುತ್ತಾ ಹಿಂದೆ ಬಿದ್ದಿದ್ದಾನೆ. ಇದರಿಂದ ರೊಚ್ಚಿಗೆದ್ದ ತಂದೆ ಈರಯ್ಯ ಹಾಗೂ ಸಂಬಂಧಿಕರು ಒಂದು ರಾತ್ರಿ ಸುಮಾರು 7:30ರ ವೇಳೆಗೆ ಊಟಕ್ಕೆ ಹೋಗೋಣ ಎಂದು ರಮೇಶ್‌ನನ್ನು ಅವರದ್ದೇ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ.
ನಂತರ ಒಂದು ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕುಡಿದು ನಂತರ ಊಟವನ್ನೂ ತೆಗೆದುಕೊಂಡು ಅದೇ ಕಾರಿನಲ್ಲಿ ಹತ್ತಿಕೊಂಡು ಅಲ್ಲಾಳಸಂದ್ರ ಮೇಲ್ವೇತುವೆ ಹತ್ತಿರ ಬರುತ್ತಾರೆ. ನಂತರ ಅವನ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಬಿಗಿದು ಕೊಲೆ ಮಾಡಿದ್ದರು. ನಂತರ ರಾಜಕಾಲುವೆಯಲ್ಲಿ ಇಟ್ಟುಬಿಟ್ಟು ಹೋಗಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಡಿಸಿಪಿ ಜಿ.ಕೆ.ಮಿಥುನ್ಕುಮಾರ್ ವಿವರಿಸಿದರು.











