




ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಇಟ್ಟಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣದ ದೂರುದಾರರದ ಬಂಟ್ವಾಳ ತಾಲೂಕಿನ ಆಹಾರ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ (47) ಅವರಿಗೆ ಮೇ 9ರಂದು ಬೆಳಿಗ್ಗೆ, ಅಟೋರಿಕ್ಷಾವೊಂದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಕಚೇರಿ ಸಿಬ್ಬಂದಿ ಹಾಗೂ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದರು.
ಸ್ಥಳದಲ್ಲಿದ್ದ ಕೆಎ-70-ಎ-2034 ಸಂಖ್ಯೆಯ ಅಟೋರಿಕ್ಷಾದಲ್ಲಿ 15 ಚೀಲ ಪಡಿತರ ಅಕ್ಕಿ ತುಂಬಿರುವುದು ಪತ್ತೆಯಾಯಿತು.ಈ ಬಗ್ಗೆ ವಿಚಾರಿಸಿದಾಗ, ವಿಟ್ಲ ಕಸಬಾ ಗ್ರಾಮದ ನಿವಾಸಿ ಅಲಿ ಅಕ್ಬರ್ (40) ತಾನೇ ಅಕ್ಕಿ ಚೀಲಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪರಿಶೀಲನೆ ವೇಳೆ 15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ತೂಕದ ಪಡಿತರ ಅಕ್ಕಿ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹23,098 ಎಂದು ಅಂದಾಜಿಸಲಾಗಿದೆ. ಸ್ವಾಧೀನಪಡಿಸಿಕೊಂಡ ಅಕ್ಕಿ ಹಾಗೂ ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.103/2026ರಡಿ ಅವಶ್ಯಕ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಕಲಂ 18ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








