
ನವದೆಹಲಿ: ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್ ಲೈಟ್, ಪ್ರತಿಫಲಕ ಅಥವಾ ಎಚ್ಚರಿಕೆ ಸೂಚನಾ ಫಲಕಗಳಿಲ್ಲದೆ ನಿಲ್ಲಿಸಿದ್ದ ಟ್ರಕ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದರೆ, ಅದಕ್ಕೆ ಕಾರು ಚಾಲಕನನ್ನೇ ತಪ್ಪಿತಸ್ಥ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
2013ರಲ್ಲಿ ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಿಎ ಅಂತಿಮ ವರ್ಷದ ವಿದ್ಯಾರ್ಥಿ ಆಕಾಶ್ ಕುಮಾರ್ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಮಾ ಪರಿಹಾರ ಪ್ರಶ್ನಿಸಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ಪೀಠ, ರಾತ್ರಿ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಾದ ಪಾರ್ಕಿಂಗ್ ಲೈಟ್, ಪ್ರತಿಫಲಕ ಅಥವಾ ಎಚ್ಚರಿಕೆ ಫಲಕವಿಲ್ಲದೆ ಭಾರೀ ವಾಹನವನ್ನು ನಿಲ್ಲಿಸುವುದು ಗಂಭೀರ ನಿರ್ಲಕ್ಷ್ಯ ಎಂದು ಅಭಿಪ್ರಾಯಪಟ್ಟಿದೆ.
ಇಂತಹ ಸಂದರ್ಭದಲ್ಲಿ ಸಂಭವಿಸುವ ಅಪಘಾತಕ್ಕೆ ಟ್ರಕ್ ಚಾಲಕ ಹಾಗೂ ಮಾಲೀಕರೇ ಪ್ರಾಥಮಿಕ ಹೊಣೆಗಾರರು ಎಂದು ಸ್ಪಷ್ಟಪಡಿಸಿದೆ.ಪ್ರಕರಣದ ವಿವರ:2013ರ ಜೂನ್ 11ರಂದು ದೆಹಲಿಯ ಬಿಆರ್‌ಟಿ ಕಾರಿಡಾರ್‌ನ ಆಂಡ್ರೂಸ್ ಗಂಜ್ ಬಸ್ ನಿಲ್ದಾಣದ ಸಮೀಪ ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿಎ ವಿದ್ಯಾರ್ಥಿ ಆಕಾಶ್ ಕುಮಾರ್ ಮೃತಪಟ್ಟಿದ್ದರು. ಟ್ರಕ್‌ನಲ್ಲಿ ಪಾರ್ಕಿಂಗ್ ಲೈಟ್ ಅಥವಾ ಎಚ್ಚರಿಕೆ ಸೂಚನೆಗಳಿರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ (MACT) ಮೃತರ ಕುಟುಂಬಕ್ಕೆ ₹81.21 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ₹80 ಸಾವಿರ ಹೆಚ್ಚುವರಿ ಪರಿಹಾರ ಸೇರಿಸಿ, ಒಟ್ಟು ₹82.01 ಲಕ್ಷವನ್ನು ನಾಲ್ಕು ವಾರಗಳೊಳಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.








