Monday, July 6, 2026
spot_imgspot_img
spot_imgspot_img

ವಿಳಿಂಜಂ ಎಂಡಿ ಹುದ್ದೆಯಿಂದ ದಿವ್ಯಾ ಅಯ್ಯರ್ ವರ್ಗಾವಣೆ; ಅದಾನಿಗೆ ಲಾಭ ಮಾಡಿಕೊಡುವ ಉದ್ದೇಶ: ಸಿಪಿಐ(ಎಂ) ಆರೋಪ

- Advertisement -
- Advertisement -

ತಿರುವನಂತಪುರಂ, ಜು. 4: ವಿಳಿಂಜಂ ಅಂತರರಾಷ್ಟ್ರೀಯ ಬಂದರಿನ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಯಿಂದ ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರನ್ನು ವರ್ಗಾವಣೆ ಮಾಡಿರುವುದು ಅದಾನಿ ಸಮೂಹಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ನಡೆದಿದೆ ಎಂದು ವಿರೋಧ ಪಕ್ಷ ಸಿಪಿಐ(ಎಂ) ಶನಿವಾರ ಆರೋಪಿಸಿದೆ. ಅಲ್ಲದೆ, ಈ ವರ್ಗಾವಣೆಯ ಹಿಂದಿನ ಕಾರಣಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ (ಎಪಿಎಸ್‌ಇಝಡ್‌)ನ ಬಂದರು ರಿಯಾಯಿತಿದಾರ ಸಂಸ್ಥೆಯಾಗಿರುವ ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್‌ (ಎವಿಪಿಪಿಎಲ್‌)ನಲ್ಲಿನ ಶೇ 49ರಷ್ಟು ಪಾಲನ್ನು ಸ್ವಿಟ್ಜರ್‌ಲ್ಯಾಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿ (ಎಂಎಸ್‌ಸಿ)ಗೆ ವರ್ಗಾಯಿಸುವ ಪ್ರಸ್ತಾವನೆಗೆ ಸಂಬಂಧಿಸಿದ ವಿವಾದದ ನಡುವೆಯೇ ಈ ಆರೋಪ ಕೇಳಿಬಂದಿದೆ.ಸಿಪಿಐ(ಎಂ)ನ ಹಿರಿಯ ನಾಯಕ ಹಾಗೂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಕೆ.ಕೆ. ರಾಗೇಶ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ.ವಿಳಿಂಜಂ ಬಂದರು ರಿಯಾಯಿತಿ ಒಪ್ಪಂದದ ಷರತ್ತುಗಳನ್ನು ಬದಲಾಯಿಸಲು ನಡೆದ ಪ್ರಯತ್ನಗಳನ್ನು ವಿರೋಧಿಸುವ ಮೂಲಕ ದಿವ್ಯಾ ಎಸ್. ಅಯ್ಯರ್ ಅವರು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಗೇಶ್ ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ಅದಾನಿ ಸಮೂಹದ ಅಧಿಕಾರಿಗಳು ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲು ಹಲವು ಬಾರಿ ಪ್ರಯತ್ನ ನಡೆಸಿದ್ದರು ಎಂದು ಅವರು ದೂರಿದ್ದಾರೆ.

ಆದರೆ, ಆಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಂತಹ ಪ್ರಯತ್ನಗಳನ್ನು ತಿರಸ್ಕರಿಸಿ, ಸರಕಾರಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ ಕುರಿತ ನಿರ್ಧಾರಗಳನ್ನು ಸರಕಾರವೇ ಕೈಗೊಳ್ಳುತ್ತದೆ ಎಂದು ಕಂಪೆನಿಗೆ ಸ್ಪಷ್ಟಪಡಿಸಿದ್ದರು ಎಂದು ರಾಗೇಶ್ ಹೇಳಿದ್ದಾರೆ.ಸರಕಾರ ಬದಲಾದ ತಕ್ಷಣವೇ ದಿವ್ಯಾ ಎಸ್. ಅಯ್ಯರ್ ಅವರನ್ನು ವರ್ಗಾವಣೆ ಮಾಡಿ, ಬಂದರು ಆಡಳಿತದಲ್ಲಿ ಅನುಭವವಿಲ್ಲದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಸ್ತುತ ದಿವ್ಯಾ ಎಸ್. ಅಯ್ಯರ್ ಅವರು ಸ್ಥಳೀಯ ಸ್ವ-ಆಡಳಿತ (ಎಲ್‌ಎಸ್‌ಜಿಡಿ) ಇಲಾಖೆಯ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಯೋಜನೆಯ ನೇತೃತ್ವ ವಹಿಸಿದ್ದ ಅನುಭವಿ ಅಧಿಕಾರಿಯನ್ನು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಏಕೆ ವರ್ಗಾವಣೆ ಮಾಡಲಾಯಿತು ಎಂಬುದನ್ನು ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರು ಸ್ಪಷ್ಟಪಡಿಸಬೇಕು ಎಂದು ಎಡಪಂಥೀಯ ನಾಯಕರು ಆಗ್ರಹಿಸಿದ್ದಾರೆ.ಅದಾನಿ ಸಮೂಹದ ಅಧಿಕಾರಿಗಳೊಂದಿಗಿನ ಸಭೆಯ ‘ಫಲಿತಾಂಶಗಳು’ ಈಗ ಹೊರಹೊಮ್ಮಲಾರಂಭಿಸಿವೆ ಎಂದು ಆರೋಪಿಸಿರುವ ರಾಗೇಶ್, ಸತೀಸನ್ ಅವರ ಇತ್ತೀಚಿನ ಮಂಗಳೂರು ಭೇಟಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಅವರು ಚಾರ್ಟರ್ಡ್ ವಿಮಾನದ ಮೂಲಕ ಮಂಗಳೂರಿಗೆ ತೆರಳಿದ್ದ ಭೇಟಿ ಯಾವ ಉದ್ದೇಶಕ್ಕಾಗಿ ನಡೆದಿತ್ತು ಹಾಗೂ ಅದರ ವೆಚ್ಚವನ್ನು ಯಾರು ಭರಿಸಿದ್ದರು ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬಂದರು ಖಾತೆಯನ್ನು ಹಣಕಾಸು ಇಲಾಖೆಯೊಂದಿಗೆ ಮುಖ್ಯಮಂತ್ರಿಯವರ ನೇರ ಅಧೀನದಲ್ಲೇ ಉಳಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನೂ ಸಿಪಿಐ(ಎಂ) ಟೀಕಿಸಿದೆ. ಪ್ರಸ್ತಾವಿತ ಷೇರು ವರ್ಗಾವಣೆಯನ್ನು ಪರಿಶೀಲಿಸಲು ರಚಿಸಲಾದ ಅಧಿಕಾರಿಗಳ ಸಮಿತಿಯಲ್ಲಿ ಮುಖ್ಯಮಂತ್ರಿಯವರ ಅಧೀನದಲ್ಲಿರುವ ಇಲಾಖೆಗಳ ಅಧಿಕಾರಿಗಳನ್ನೇ ಸೇರಿಸಲಾಗಿದ್ದು, ಅದರ ಸ್ವತಂತ್ರ ಕಾರ್ಯವೈಖರಿಯ ಬಗ್ಗೆ ಅನುಮಾನಗಳು ಮೂಡಿವೆ ಎಂದು ರಾಗೇಶ್ ಹೇಳಿದ್ದಾರೆ.ರಿಯಾಯಿತಿ ಒಪ್ಪಂದದ ಪ್ರಕಾರ ಯಾವುದೇ ಷೇರು ವರ್ಗಾವಣೆಗೆ ರಾಜ್ಯ ಸರ್ಕಾರದ ಪೂರ್ವಾನುಮತಿ ಅಗತ್ಯವಾಗಿದ್ದು, ಪ್ರಸ್ತಾವಿತ ಷೇರು ಮಾರಾಟದ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳಲು ಸಿದ್ಧವಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ವಿಳಿಂಜಂ ಯೋಜನೆಯಲ್ಲಿ ರಾಜ್ಯ ಸರಕಾರ ಸುಮಾರು 5,400 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಅದಾನಿ ಸಮೂಹವು ಸುಮಾರು 2,400 ಕೋಟಿ ರೂ. ಹೂಡಿಕೆ ಮಾಡಿದೆ. ಆದರೆ, ಪ್ರಸ್ತಾವಿತ ವ್ಯವಹಾರದ ಮೂಲಕ ಅದಾನಿ ಸಮೂಹವು 13,000 ಕೋಟಿ ರೂ.ಗಿಂತ ಹೆಚ್ಚಿನ ಲಾಭ ಗಳಿಸಲು ಮುಂದಾಗಿದೆ ಎಂದು ರಾಗೇಶ್ ಆರೋಪಿಸಿದ್ದಾರೆ.ಎಪಿಎಸ್‌ಇಝಡ್ ಸಂಸ್ಥೆಯು ಎವಿಪಿಪಿಎಲ್‌ನಲ್ಲಿನ ಶೇ 49ರಷ್ಟು ಪಾಲನ್ನು ಎಂಎಸ್‌ಸಿಗೆ ವರ್ಗಾಯಿಸುವುದಾಗಿ ರಾಜ್ಯ ಸರಕಾರಕ್ಕೆ ಪೂರ್ವ ಮಾಹಿತಿ ನೀಡದೆ ಘೋಷಣೆ ಮಾಡಿರುವ ಬಗ್ಗೆ ರಾಜ್ಯ ಸರಕಾರ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವೇ ದಿನಗಳ ಬಳಿಕ ಈ ಆರೋಪಗಳು ಕೇಳಿಬಂದಿವೆ.

ಈ ವ್ಯವಹಾರಕ್ಕೆ ರಾಜ್ಯ ಸರಕಾರ ಇನ್ನೂ ಅನುಮೋದನೆ ನೀಡಿಲ್ಲ. ರಿಯಾಯಿತಿ ಒಪ್ಪಂದದ ಪ್ರಕಾರ ಅಧಿಕಾರ ಹೊಂದಿರುವ ಸಮಿತಿಯು ಈ ವಿಷಯವನ್ನು ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಸನ್ ಈ ಹಿಂದೆ ತಿಳಿಸಿದ್ದರು.

- Advertisement -

Related news

error: Content is protected !!