


ಸುಳ್ಯ: ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಮೇಲೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ನಡೆದಿದೆ.
ಗುಜರಾತ್‌ನ ಅಹಮದಾಬಾದ್‌ನ ಪ್ರವಾಸಿಗರ ಗುಂಪೊಂದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ದೇವರಕೊಲ್ಲಿ ಅಬ್ಬಿ ಜಲಪಾತದ ಬಳಿ ರಸ್ತೆಬದಿಯಲ್ಲಿ ತಾತ್ಕಾಲಿಕವಾಗಿ ತಮ್ಮ ಟಿಟಿ ವಾಹನವನ್ನು ನಿಲ್ಲಿಸಿದ್ದಾಗ ಈ ಅಪಘಾತ ಸಂಭವಿಸಿದೆ.
ಸುಳ್ಯದ ಕಡೆಗೆ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ನೇರವಾಗಿ ನಿಂತಿದ್ದ ಪ್ರಯಾಣಿಕ ವಾಹನದ ಮೇಲೆ ಉರುಳಿಬಿದ್ದಿದೆ. ಟಿಟಿಯೊಳಗಿದ್ದ ಏಳು ಪ್ರವಾಸಿಗರಲ್ಲಿ ಒಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಕೂಡ ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್‌ಗಳ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಕ್ರೇನ್ ಮೂಲಕ ಉರುಳಿಬಿದ್ದ ಲಾರಿಯನ್ನು ಮೇಲಕ್ಕೆತ್ತಿ ಹೆದ್ದಾರಿಯನ್ನು ತೆರವುಗೊಳಿಸಲಾಯಿತು ಎಂದು ತಿಳಿದು ಬಂದಿದೆ








