
ಮಂಗಳೂರು, ಆ.31: ಸಮುದಾಯ ಸಂಘಟನೆ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮಕ್ಕೆ ಸಂಘಪರಿವಾರವು ಅಡ್ಡಿಪಡಿಸಿರುವ ಕೃತ್ಯವನ್ನು ಸಮುದಾಯ ಕರ್ನಾಟಕ ಮತ್ತು ಸಾಹಿತಿ-ಕಲಾವಿದರು ಖಂಡಿಸಿದ್ದಾರೆ.
ಸಮುದಾಯವು ಸಾಂಸ್ಕೃತಿಕ ಚಳುವಳಿಯಾಗಿದೆ. ಕರ್ನಾಟಕದ ಸಾಹಿತಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಮುದಾಯದ ಕೊಡುಗೆ ಇದೆ. ಕನ್ನಡ ರಂಗಭೂಮಿಯನ್ನು ಬೆಳೆಸುವ ಮತ್ತು ರಾಜ್ಯಾದ್ಯಂತ ವಿಸ್ತರಿಸುವ ಕೆಲಸ ವನ್ನು ಸಮುದಾಯ 50 ವರ್ಷಗಳಿಂದ ನಡೆಸುತ್ತಾ ಬಂದಿದೆ. ರಂಗಭೂಮಿಗೆ ಅನೇಕ ಕಲಾವಿದರನ್ನೂ ನಿರ್ದೇಶಕ ರನ್ನೂ ನೀಡಿರುವ ಸಮುದಾಯ ಕನ್ನಡ ಮಣ್ಣಿನ ಜೀವ ಪರಧ್ವನಿಯಾಗಿ ಸಮಾಜದ ದುರ್ಬಲ ವರ್ಗದ ಜೊತೆ ನಿಂತು ಅವರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದೆ. ಇದರಿಂದ ಹತಾಶಗೊಂಡಿರುವ ಸಂಘಪರಿವಾರದ ಈ ದಾಳಿ ಖಂಡನೀಯ. ಸರಕಾರ ತಕ್ಷಣ ಕಿಡಿಗೇಡಿಗಳನ್ನು ಮತ್ತು ಈ ದಾಳಿಗೆ ಪ್ರೇರಣೆ ನೀಡಿದವರನ್ನು ಗುರುತಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಮುದಾಯ ಕರ್ನಾಟಕದ ಪದಾಧಿಕಾರಿಗಳದ ಮನೋಜ್ ವಾಮಂಜೂರು, ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ರಂಗಕರ್ಮಿ ಐ ಕೆ ಬೊಳುವಾರು, ವಿದ್ದು ಉಚ್ಚಿಲ್, ಸಮುದಾಯದ ಹಿರಿಯ ಮುಖಂಡ ವಾಸುದೇವ ಉಚ್ಚಿಲ, ಪ್ರಗತಿಪರ ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ, ನಿವೃತ್ತ ಪ್ರಾಧ್ಯಾಪಕ ರಾಜೇಂದ್ರ ಉಡುಪ, ರಂಗ ಕಲಾವಿದರಾದ ಶ್ಯಾಮ್ಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ಹಿರಿಯ ನ್ಯಾಯವಾದಿ ಯಶವಂತ ಮರೋಳಿ ಒತ್ತಾಯಿಸಿದ್ದಾರೆ.








