


ಪುತ್ತೂರು:ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಾಯೋಗಿಕ ಸಂಚಾರದ ವೇಳೆ ಹಾಗೂ ಮುಂದೆ ಅಧಿಕೃತ ಸಂಚಾರ ಆರಂಭವಾದ ಬಳಿಕ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸುವಂತೆ ಹಿರಿಯ ನ್ಯಾಯವಾದಿ ಡಾ. ಅರುಣಾ ಶ್ಯಾಮ್. ಎಂ. ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರೈಲ್ವೆ ಮಂಡಳಿಯ ನಿರ್ದೇಶನದಂತೆ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 5ರಂದು ಯಶವಂತಪುರ-ಮಂಗಳೂರು ಸೆಂಟ್ರಲ್ ನಡುವೆ ಮತ್ತೊಂದು ಪ್ರಾಯೋಗಿಕ ಸಂಚಾರ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕ ಸಂಚಾರದ ವೇಳೆಯೇ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಪ್ರಯಾಣಿಕರು ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈದ್ಯಕೀಯ ಉದ್ದೇಶಗಳಿಗಾಗಿ ಬೆಂಗಳೂರು ಮತ್ತು ಮಂಗಳೂರಿಗೆ ಪ್ರಯಾಣಿಸುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಾಯೋಗಿಕ ಸಂಚಾರದ ಸಂದರ್ಭ ಪುತ್ತೂರಿನಲ್ಲಿ ನಿಲುಗಡೆ ನೀಡುವುದರಿಂದ ಪ್ರಯಾಣಿಕರ ಬೇಡಿಕೆ, ರೈಲಿನಲ್ಲಿ ಹತ್ತುವ ಮತ್ತು ಇಳಿಯುವವರ ಸಂಖ್ಯೆ ಹಾಗೂ ಸಂಚಾರದ ಸಮಯದ ಮೇಲಿನ ಪರಿಣಾಮವನ್ನು ಪರಿಶೀಲಿಸಲು ರೈಲ್ವೆ ಇಲಾಖೆಗೆ ಅವಕಾಶ ದೊರೆಯಲಿದೆ. ಆದ್ದರಿಂದ ಪ್ರಾಯೋಗಿಕ ಸಂಚಾರದ ವೇಳೆ ಪುತ್ತೂರಿನಲ್ಲಿ ನಿಲುಗಡೆ ನೀಡಿ, ವಾಣಿಜ್ಯ ಸಂಚಾರ ಆರಂಭವಾದ ಬಳಿಕವೂ ಅದನ್ನು ನಿಯಮಿತ ನಿಲುಗಡೆಯಾಗಿ ಮುಂದುವರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.








