Saturday, October 31, 2026
spot_imgspot_img
spot_imgspot_img

ಸರಕಾರಿ‌ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಐವರು ಆರೋಪಿತರು ಖುಲಾಸೆ

- Advertisement -
- Advertisement -

ಪುತ್ತೂರು: ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಅಡ್ಡಿಪಡಿಸಿ, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುತ್ತೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೇವಪ್ಪ ಕೆ., ಗುರುವ ಮುಗೇರ, ಬೇಬಿ, ಜನಾರ್ದನ ಮತ್ತು ಮೋಹನ ಕೆ. ಅವರು ಆರೋಪಿಗಳಾಗಿದ್ದರು.

2025ರ ಏಪ್ರಿಲ್ 29ರಂದು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕಾಡಬಾಗಿಲು–ಅಲೆಖಿ ಬಾವ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಕಾಮಗಾರಿಗೆ ಅಡ್ಡಿಪಡಿಸಿ, ಕರ್ತವ್ಯ ನಿರತ ಅಧಿಕಾರಿಗಳನ್ನು ತಳ್ಳಿ, ನಿಂದಿಸಿ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 126, 132, 351(2), 352 ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು , ಸಾಕ್ಷಿಗಳ ಹೇಳಿಕೆಗಳಲ್ಲಿನ ವ್ಯತ್ಯಾಸಗಳು, ಆರೋಪಿತ ಕೃತ್ಯಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ಸಾಕ್ಷಿಗಳಿಂದ ಸಮರ್ಪಕ ದೃಢೀಕರಣ ದೊರೆಯದಿರುವುದು ಹಾಗೂ ವೀಡಿಯೊ ದಾಖಲೆಯಲ್ಲಿ ಹಲ್ಲೆ, ಕ್ರಿಮಿನಲ್ ಬಲಪ್ರಯೋಗ ಮತ್ತು ಬೆದರಿಕೆ ಆರೋಪಗಳು ಸಾಬೀತಾಗದಿರುವ ಅಂಶಗಳನ್ನು ಪರಿಗಣಿಸಿದರು. ಅಲ್ಲದೆ, ಆರೋಪಿಗಳಿಗೂ ಗ್ರಾಮ ಪಂಚಾಯತ್‌ಗೂ ಸಂಬಂಧಿಸಿದಂತೆ ರಸ್ತೆ ಕಾಮಗಾರಿಯ ವಿಚಾರದಲ್ಲಿ ಸಿವಿಲ್ ವ್ಯಾಜ್ಯ ಬಾಕಿ ಇದ್ದ ಅಂಶವನ್ನೂ ನ್ಯಾಯಾಲಯ ಗಮನಿಸಿ, ಪ್ರಾಸಿಕ್ಯೂಷನ್ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ತೀರ್ಮಾನಿಸಿ ಎಲ್ಲಾ 5 ಆರೋಪಿತರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆರೋಪಿಗಳ ಪರವಾಗಿ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಅವರು ವಾದ ಮಂಡಿಸಿದ್ದರು.

- Advertisement -

Related news

error: Content is protected !!