Wednesday, November 4, 2026
spot_imgspot_img
spot_imgspot_img

15 ವರ್ಷದೊಳಗಿನ ಮಕ್ಕಳಿಗೆ ಕೋಚಿಂಗ್ ನಿಷೇಧ: ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಸರ್ಕಾರದಿಂದ ಕಠಿಣ ಕರಡು ನಿಯಮ ಪ್ರಕಟ

- Advertisement -
- Advertisement -

ಬೆಂಗಳೂರು: ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಅತಿಯಾದ ಒತ್ತಡ, ದರ ವಸೂಲಿ ಹಾಗೂ ಶೈಕ್ಷಣಿಕ ಅಕ್ರಮಗಳ ನಿಯಂತ್ರಿಸಲು ಕಠಿಣ ಕರಡು ನಿಯಮಗಳನ್ನು ಪ್ರಕಟಿಸಿದೆ.

ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ನಿಯಮಗಳ ಪ್ರಕಾರ, 15 ವರ್ಷದ ಕೆಳಗಿನ ಅಥವಾ ಹತ್ತನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಯಾವುದೇ ಖಾಸಗಿ ಕೋಚಿಂಗ್ ಕೇಂದ್ರಗಳು ದಾಖಲಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ನಿಯಮಗಳ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ಹತ್ತನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕೋಚಿಂಗ್ ತರಗತಿಗಳ ಅವಧಿಯನ್ನು ಪ್ರತಿದಿನ ಗರಿಷ್ಠ ಐದು ಗಂಟೆಗಳಿಗೆ ಸೀಮಿತಗೊಳಿಸಲು ಪ್ರಸ್ತಾಪಿಸಲಾಗಿದೆ.

ತರಬೇತಿ ಕೇಂದ್ರಗಳು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಹಾಗೂ ಮುಖ್ಯ ಶಾಲೆ ಅಥವಾ ಕಾಲೇಜು ಅವಧಿಯಲ್ಲಿ ಯಾವುದೇ ತರಗತಿಗಳನ್ನು ನಡೆಸುವಂತಿಲ್ಲ. ಇದರೊಂದಿಗೆ, ಪ್ರತಿ ಕ್ಯಾಂಪಸ್‌ನಲ್ಲಿ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ.

ಕೋಚಿಂಗ್ ಸಂಸ್ಥೆಗಳ ಶುಲ್ಕ ವಸೂಲಿ ನಿಯಂತ್ರಣಕ್ಕೂ ಸರ್ಕಾರ ಮುಂದಾಗಿದ್ದು, ಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಬಾರಿಗೆ ಮುಂಗಡವಾಗಿ ವಸೂಲಿ ಮಾಡುವುದನ್ನು ನಿಷೇಧಿಸಲು ಪ್ರಸ್ತಾಪಿಸಲಾಗಿದ್ದು, ಪೋಷಕರಿಗೆ ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು ಎಂದು ಕರಡು ನಿಯಮಗಳಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಯು ವೈಯಕ್ತಿಕ ಕಾರಣಗಳಿಂದ ಅಥವಾ ಇತರ ಅನಿವಾರ್ಯ ಪರಿಸ್ಥಿತಿಗಳಿಂದ ಕೋಚಿಂಗ್ ಕೋರ್ಸ್ ಅನ್ನು ಮಧ್ಯದಲ್ಲಿಯೇ ತೊರೆದರೆ, ಉಳಿದ ಅವಧಿಗೆ ಸಂಬಂಧಿಸಿದ ಶುಲ್ಕವನ್ನು 10 ದಿನಗಳೊಳಗೆ ಮರುಪಾವತಿಸಬೇಕು ಎಂದು ನಿಯಮದಲ್ಲಿ ತಿಳಿಸಲಾಗಿದೆ.

ತರಬೇತಿ ಕೇಂದ್ರಗಳ ನೋಂದಣಿ ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವುದು ಅಥವಾ ಸಂಸ್ಥೆಯನ್ನು ಬಂದ್‌ ಮಾಡುವ ನಿಯಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಕರಡು ನಿಯಮಗಳ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕೋಚಿಂಗ್‌ ಸೆಂಟರ್‌ಗಳು 15 ದಿನಗಳೊಳಗೆ ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!