


ಗೋರಖ್ಪುರ: ತಾಯಿಯ ನಿಧನದ ಸುದ್ದಿ ತಿಳಿದಿದ್ದರೂ ಪೂರ್ವನಿಗದಿತ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸದೆ ಕರ್ತವ್ಯ ನಿರ್ವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡೆಗೆ ಬಿಜೆಪಿ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಗುರುವಾರ ಉತ್ತರಾಖಂಡದ ಪೌರಿ ಗಡ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.ತಾಯಿಯ ನಿಧನದ ಸುದ್ದಿ ತಿಳಿದ ಬಳಿಕವೂ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಮುಂದುವರಿಸಿದ್ದಾರೆ.

ಗೋರಖ್ಪುರದಲ್ಲಿ ನಡೆದ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದು, ಬಳಿಕ ಪೂರ್ವನಿಗದಿತ ಸರ್ಕಾರಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.ಯೋಗಿ ಆದಿತ್ಯನಾಥ್ ಅವರು ಈ ಹಿಂದೆಯೂ ಕುಟುಂಬದಲ್ಲಿ ಸಂಭವಿಸಿದ ದುಃಖದ ಸಂದರ್ಭದಲ್ಲೂ ಕರ್ತವ್ಯಕ್ಕೆ ಆದ್ಯತೆ ನೀಡಿದ್ದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ತಂದೆ ನಿಧನರಾದಾಗಲೂ ಸರ್ಕಾರಿ ಜವಾಬ್ದಾರಿಗಳನ್ನು ಮುಂದುವರಿಸಿದ್ದರು.ಯೋಗಿ ಅವರ ಕರ್ತವ್ಯನಿಷ್ಠೆಯನ್ನು ಬಿಜೆಪಿ ಗೋರಖ್ಪುರ ಪ್ರಾದೇಶಿಕ ಕಾರ್ಯದರ್ಶಿ ಸತ್ಯೇಂದ್ರ ಸಿನ್ಹಾ ಶ್ಲಾಘಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಯೋಗಿ ಆದಿತ್ಯನಾಥ್ ಅವರು ದೇಶದ 140 ಕೋಟಿ ಜನರನ್ನೇ ತಮ್ಮ ಕುಟುಂಬವೆಂದು ಭಾವಿಸುತ್ತಾರೆ. ನಮ್ಮ ಜವಾಬ್ದಾರಿಗಳಿಗೆ ಹೇಗೆ ಬದ್ಧರಾಗಿರಬೇಕು ಎಂಬುದನ್ನು ಅವರಿಂದ ಕಲಿಯಬೇಕು. ತಂದೆಯ ನಿಧನದ ಸಂದರ್ಭದಲ್ಲಿಯೂ ಅವರು ಕರ್ತವ್ಯ ಮುಂದುವರಿಸಿದ್ದರು.
ಇದೀಗ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿದಿಲ್ಲ. ಅವರ ಕರ್ತವ್ಯನಿಷ್ಠೆ ಎಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವೈಯಕ್ತಿಕ ಬದುಕಿನ ನೋವಿನ ನಡುವೆಯೂ ಸಾರ್ವಜನಿಕ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ ಯೋಗಿ ಆದಿತ್ಯನಾಥ್ ಅವರ ನಡೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.








