ಮಂಡ್ಯ: ದಂಪತಿಗಳಿಬ್ಬರು ಕೊರೋನಾದಿಂದಾಗಿ ಮೃತಪಟ್ಟ ಹಿನ್ನಲೆಯಲ್ಲಿ 5 ದಿನದ ಮಗು ಅನಾಥವಾಗಿರುವ ಘಟನೆ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ನಂಜುಂಡೇಗೌಡ(45) ಹಾಗೂ ಪತ್ನಿ ಮಮತಾ(31) ಎಂದು ಗುರುತಿಸಲಾಗಿದೆ.

ನಂಜುಂಡೇಗೌಡ ಅವರಿಗೆ ಕೋವಿಡ್ ಸೋಂಕು ತಗುಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಏ.30 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ತುಂಬು ಗರ್ಭಿಣಿಯಾಗಿದ್ದ ಪತ್ನಿ ಮಮತಾಗೂ ಸೋಂಕು ದೃಢಪಟ್ಟಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಗಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಮತಾ ಉಸಿರಾಟದ ಸಮಸ್ಯೆ ಹೆಚ್ಚಾಗಿ ಶುಕ್ರವಾರ ಸಂಜೆ ಮೃತಪಟ್ಟಿದ್ದು, ಇದರಿಂದ 5 ದಿನದ ಹೆಣ್ಣು ಮಗು ಅನಾಥವಾಗಿದೆ.

ಮೃತ ನಂಜುಂಡೇಗೌಡ ಸಣ್ಣಪುಟ್ಟ ಫೈನಾನ್ಸ್ ಮಾಡಿಕೊಡಿದ್ದರು. ದಂಪತಿಗಳಿಗೆ ಮದುವೆಯಾಗಿ 9 ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಗುವಾದ ಸಂದರ್ಭದಲ್ಲಿ ತಂದೆ-ತಾಯಿ ಕೋವಿಡ್ ಗೆ ಬಲಿಯಾಗಿರುವುದು ದುರಂತವೆಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.











