ಮಂಗಳೂರು: ಬೈಕ್ ಸ್ಕಿಡ್ ಆಗಿ ಅಪಘಾತಗೊಂಡಿದ್ದ ಇಬ್ಬರನ್ನು ಪಶ್ಚಿಮ ವಲಯ ಐಜಿಪಿ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ಬಗ್ಗೆ ವರದಿಯಾಗಿದೆ.

ಮಂಗಳೂರಿನ ಯೆಯ್ಯಾಡಿಯಲ್ಲಿ ದನ ಏಕಾಏಕಿ ಅಡ್ಡ ಬಂದ ಪರಿಣಾಮ ಬೈಕ್ ಸವಾರರಿಗೆ ಅಪಘಾತವಾಗಿತ್ತು. ಇದರ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಗಾಯ ಗೊಂಡಿದ್ದರು. ಅಪಘಾತಗೊಳಗಾದವರನ್ನು ಸಮಾಜ ಕಲ್ಯಾಣ ಇಲಾಖೆಯ ಬಾಲಸುಬ್ರಹ್ಮಣ್ಯ ಮತ್ತು ಎಂಆರ್ಪಿಎಲ್ ಉದ್ಯೋಗಿ ರಾಜು ಕೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಗಾಯಾಳುಗಳನ್ನು ನೋಡಿ ಮಾತನಾಡಿಸಿದ್ದು, ನಂತರ ಇಬ್ಬರೂ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ನಾಗರೀಕರಿಗೆ ತುರ್ತು ಸಮಯದಲ್ಲಿ ನೆರವಾದ ಐಜಿಪಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ಸಿಗುತ್ತಿದೆ.









