

ದಾವಣಗೆರೆ: ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಅಮ್ಜದ್ ಖಾನ್ (44), ಇಸ್ಮಾಯಿಲ್ ಖಾನ್ (42) ನೂರ್ ಅಹ್ಮದ್ (36) ಎನ್ನಲಾಗಿದೆ.

ಸೆ. 2 ರಂದು ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಅವರ ಕೊಲೆ ನಡೆದಿತ್ತು.ಆರೋಪಿಗಳು ಬಸವಾ ಪಟ್ಟಣದ ಗುಡ್ಡದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ, ಹೂತು ಹಾಕಿದ್ದರು. ಕೊಲೆಯಾದ ಕೈ ಮುಖಂಡ ಜೈನುಲ್ಲಾ ಖಾನ್ ಆರೋಪಿ ಅಮ್ಜದ್ ಖಾನ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಆರೋಪಿ ಅಮ್ಜದ್ ಖಾನ್ ಗಮನಕ್ಕೆ ಬಂದಿತ್ತು. ಆ ಕಾರಣಕ್ಕಾಗಿ ಸಹೋದರ ಇಸ್ಮಾಯಿಲ್ ಖಾನ್ ಹಾಗೂ ಸ್ನೇಹಿತ ನೂರ್ ಅಹ್ಮದ್ ಜೊತೆ ಸೇರಿ ಜೈನುಲ್ಲಾ ಖಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೃತ ಜೈನುಲ್ಲಾ ಖಾನ್ ಬೆಸ್ಕಾಂ ಗುತ್ತಿಗೆದಾರನಾಗಿದ್ದು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿದ್ದರು. ಒಂದು ವಾರದ ಹಿಂದೆ ನಾಪತ್ತೆ ಆಗಿದ್ದರು. ಉದ್ದೇಶಪೂರ್ವಕವಾಗಿ ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ .ರಿಷ್ಯಂತ್ ಭೇಟಿ ನೀಡಿ ಪರಶೀಲನೆ ನಡೆಸಿದ್ದರು. ಬಸವಾಪಟ್ಟಣದ ಪೊಲೀಸರು ಆರೋಪಿಗಳನ್ನು ಬಂಧಿಸಿ ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.









