





ಕಲಬುರಗಿ : ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ಯುವಕ ಶೌಚಕ್ಕೆ ಹೋಗಿ ಬರುತ್ತೇನೆಂದು ಹೋಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ರೇವಣಸಿದ್ದಪ್ಪ(26) ಮೃತ ವ್ಯಕ್ತಿ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ ಈತ ಆಕೆಯನ್ನು ವಿವಾಹ ಕೂಡ ಆಗಿದ್ದನು. ಈ ವಿಚಾರ ತಿಳಿದ ಬಾಲಕಿಯ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದಾಗಿ ಈತನನ್ನು ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿತ್ತು.
ಕಳೆದ ಎರಡು ವಾರಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಇತ್ತ ಬಾಲಕಿಯ ಪೋಷಕರು ಆಕೆಯನ್ನು ಕರೆದುಕೊಂಡು ಬಂದು ತಾಳಿ ಕಿತ್ತುಹಾಕಿದ್ದರು. ಅಲ್ಲದೆ, ಅದನ್ನು ರೇವಣಸಿದ್ದಪ್ಪನ ಮುಖದ ಮೇಲೆ ಬಿಸಾಕಿದ್ದರಂತೆ. ಈ ಎಲ್ಲದರಿಂದ ನೊಂದಿದ್ದ ಈತ ಇನ್ಸ್ಟಾಗ್ರಾಂನಲ್ಲಿ ತನ್ನದೇ ಫೋಟೋಗೆ ರಿಪ್ ಎಂದು ಬರೆದು ಪೋಸ್ಟ್ ಕೂಡ ಮಾಡಿದ್ದ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ಆತನ ಪೋಷಕರು, ಈತನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೂ ತಮ್ಮ ಗ್ರಾಮಕ್ಕೆ ಈತ ಬಂದು ಹೋಗುತ್ತಿದ್ದ. ಇದರ ಮಧ್ಯೆ ಊರಲ್ಲಿ ಇವನ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದ್ದರು. ಹೀಗಾಗಿ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಈತ ಬಂದಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಆತ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದಾನ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ಮರಕ್ಕೆ ನೇಣು ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








