ಬಂಟ್ವಾಳ: ನಿನ್ನೆ ಬೆಳಿಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವೀರಕಂಭ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯೆ ಲಲಿತಾ ರವರು ಸಂಜೆ ವೇಳೆಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಇದೀಗ ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ಲಲಿತಾ ರವರು ಬೆಳಿಗ್ಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಸಂಜೆ ವೇಳೆಗೆ ಲಲಿತಾ ರವರು ಮಾಜಿ ಸಚಿವ ರಮಾನಾಥ ರೈ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.


ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದಲ್ಲಿದ್ದರು. ಈ ಭಾರಿಯ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು 7-7 ಸ್ಥಾನ ಪಡೆದುಕೊಂಡಿದ್ದರು. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು.

ರಾಜಧರ್ಮ ಮಾರ್ಗ ಎಂದು ಹೇಳುತ್ತಿರುವ ಬಿಜೆಪಿಗರು ಇದೀಗ ವಾಮಮಾರ್ಗ ಮೂಲಕ ಅಧಿಕಾರ ಪಡೆಯಲು ಮುಂದಾಗಿದ್ದು, ವಿಪರ್ಯಾಸ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.










