Sunday, July 19, 2026
spot_imgspot_img
spot_imgspot_img

ಸ್ಥಳೀಯರ ವಿರೋಧದ ನಡುವೆಯೂ ಕ್ರಿಕೆಟ್ ಪಂದ್ಯಾಟಕ್ಕೆ ಅನುಮತಿ ನೀಡಿದ ಪೊಲೀಸ್ ಇಲಾಖೆ-ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಶರತ್ತುಬದ್ದ ಅನುಮತಿ…!-ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ D ಗ್ರೂಪ್‌ನ ಕ್ರಿಕೆಟ್ ಪಂದ್ಯಾಟ

- Advertisement -
- Advertisement -

ವಿಟ್ಲ: ಸ್ಥಳೀಯರ ವಿರೋಧದ ನಡುವೆಯೂ ವಿಟ್ಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ವಿಟ್ಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಧ್ವನಿವರ್ಧಕ ಹಾಗೂ ಇತರ ಸಂಗೀತ ಸಾಧನಗಳ ಬಳಕೆಗೆ ವಿಟ್ಲ ಪೊಲೀಸ್ ಠಾಣೆ ಶರತ್ತುಬದ್ದ ಅನುಮತಿ ನೀಡಿದೆ.ಡಿ ಗ್ರೂಪ್ ಸ್ಪೋರ್ಟ್ಸ್ ಕ್ಲಬ್ ವಿಟ್ಲ ವತಿಯಿಂದ ಆಯೋಜಿಸಲಾಗಿರುವ ಈ ಪಂದ್ಯಾಟವು ಏಪ್ರಿಲ್ 11 ಹಾಗೂ 12 ರಂದು ನಡೆಯಲಿದ್ದು, ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ.ಈ ಕುರಿತು ಪರವಾನಿಗೆ ಸಂಖ್ಯೆ 122/ವಿ.ಪೋ.ಠಾಣೆ/ಧೃವ/2026 ಅಡಿಯಲ್ಲಿ ಅನುಮತಿ ಮಂಜೂರಾಗಿದ್ದು, ಅರ್ಜಿದಾರರಾಗಿ ಅಬ್ದುಲ್ ಸಮದ್ ಮನವಿ ಸಲ್ಲಿಸಿದ್ದರು.ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು ಹಾಗೂ ಸಂಘಟಕರು ಅಫಿದಾವಿತ್ ಸಲ್ಲಿಸಬೇಕು. ಅನುಮತಿ ನೀಡಲಾದ ಸಮಯ ಮತ್ತು ಕಾರ್ಯಕ್ರಮದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧ್ವನಿವರ್ಧಕಗಳನ್ನು ನಿಗದಿತ ಶಬ್ದ ಮಿತಿಯೊಳಗೆ ಮಾತ್ರ ಬಳಸಬೇಕು.

ಕಾರ್ಯಕ್ರಮದ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಪರಿಸ್ಥಿತಿ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ನಿಗದಿಪಡಿಸಿದ ಸಮಯ ಮೀರಿಸಿ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸೂಚಿಸಲಾಗಿದೆ.ಇದೇ ವೇಳೆ ಸರಕಾರಿ ಕಚೇರಿ, ಆಸ್ಪತ್ರೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶಾಂತಿಭಂಗವಾಗುವಂತೆ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಧರ್ಮ, ಮತ ಅಥವಾ ಜಾತಿಯ ಭಾವನೆಗೆ ಧಕ್ಕೆ ಉಂಟುಮಾಡುವ ಪ್ರಚೋದನಾತ್ಮಕ ಭಾಷಣ ಮಾಡಬಾರದು ಎಂದು ಸೂಚಿಸಲಾಗಿದೆ.ನಿಯಮ ಉಲ್ಲಂಘನೆ ಕಂಡುಬಂದರೆ ಧ್ವನಿವರ್ಧಕ ಸಾಧನಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆಗಳು ಏನು?

ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 40 ರಂತೆ ಯಾವುದೇ ಹಿಂಸಾಚಾರ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ಬರುವಂತ ಘಟನೆಗಳು ನಡೆದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮವನ್ನು ನಿಲ್ಲಿಸುವ ಅಧಿಕಾರ ಪೊಲೀಸ್ ಅಧಿಕಾರಿಗೆ ಇರುತ್ತದೆ.

ಈ ಮೇಲ್ಕಂಡ ಕ್ರಮಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕ್ರಮಗಳನ್ನು ಉಲ್ಲಂಘಿಸಿದಲ್ಲಿ ಬಾ.ದಂ.ಸಂ ಕಲಂ 188 ರಂತೆ ಮತ್ತು ಕರ್ನಾಟಕ ಪೊಲೀಸು ಕಾಯ್ದೆ ಸೆಕ್ಷನ್ 37ರ ಅನುಸಾರವಾಗಿ ಮೂರು ತಿಂಗಳ ಸಜೆ ಅಥವಾ ರೂ 500/= ಗರಿಷ್ಟ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಪಂದ್ಯಾಟಕ್ಕೆ ಕರ್ನಾಟಕ ಹಾಗೂ ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರು ಆಗಮಿಸುತ್ತಿದ್ದು, ಕಳೆದ ವರ್ಷ ಇದೇ ಪಂದ್ಯಾಟದ ವೇಳೆ ರಾತ್ರಿ ಪಂದ್ಯ ವೀಕ್ಷಣೆಗೆ ಕೇರಳದಿಂದ ಬಂದಿದ್ದ ಕೆಲ ದುಷ್ಕರ್ಮಿಗಳು ಮಾದಕ ವಸ್ತು ಸೇವಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡಿದ್ದು, ಸಮೀಪದ ಸರ್ಕಾರಿ ಶಾಲೆಯ ಮೇಲ್ಛಾವಣಿಗೆ ಮತ್ತು ಕಟ್ಟಡಕ್ಕೆ ಹಾನಿ ಉಂಟುಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಪಂದ್ಯಾಟಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಿದ್ದರು.ಆರಂಭದಲ್ಲಿ ಪಂದ್ಯಾಟಕ್ಕೆ ಅನುಮತಿ ನೀಡದ ಪೊಲೀಸ್ ಇಲಾಖೆ, ಇದೀಗ ಪಂದ್ಯಾಟದ ಪೂರ್ವ ದಿನ ಶರತ್ತುಬದ್ದ ಅನುಮತಿ ನೀಡಿದೆ.

ಎಪ್ರಿಲ್ 11 ಮತ್ತು ಎಪ್ರಿಲ್ 12 ರಂದು ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿ ವರ್ಧಕ ಬಳಕೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.ಈ ಶರತ್ತುಬದ್ದ ಅನುಮತಿಯಿಂದ ಸಂಘಟಕರು ಕೆಲವೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ವಿರೋಧದ ಹಿನ್ನೆಲೆ ವಿಠ್ಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯು ಪೊಲೀಸ್ ಇಲಾಖೆ ಸೂಚಿಸಿದಂತೆ ಅಗತ್ಯ ಬಂದೋಬಸ್ತ್ ಒದಗಿಸಿದಲ್ಲಿ ಮಾತ್ರ ಮೈದಾನದ ಬಳಕೆಗೆ ಅಂತಿಮ ಅನುಮತಿ ನೀಡುವುದಾಗಿ ಮಾಧ್ಯಮಕ್ಕೆ ತಿಳಿಸಿದೆ.

- Advertisement -

Related news

error: Content is protected !!