ಬೆಳ್ತಂಗಡಿ: ಪವಿತ್ರ ಯಾತ್ರಾಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರನ್ನೇ ಹೊಂಚುಹಾಕಿ ಚಿನ್ನಾಭರಣ ಎಗರಿಸುತ್ತಿದ್ದ ಹುಬ್ಬಳ್ಳಿಯ ತಾಯಿ ಮತ್ತು ಮಗಳ ಜೋಡಿಯನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 5.32 ಲಕ್ಷ ರೂಪಾಯಿ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ಮೇ 03, 2025 ರಂದು ದೇವಸ್ಥಾನಕ್ಕೆ ದರ್ಶನಕ್ಕಾಗಿ ಆಗಮಿಸಿದ್ದ ಲತಾ ಎಂಬುವರ ಬ್ಯಾಗ್‌ನಲ್ಲಿದ್ದ ಬರೋಬ್ಬರಿ 6,79,000 ರೂ. ಮೌಲ್ಯದ 97 ಗ್ರಾಂ ಚಿನ್ನಾಭರಣವನ್ನು ಕಳ್ಳರು ಎಗರಿಸಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಆರೋಪಿಗಳು ನ.23ರಂದು ಮತ್ತೆ ಕಳ್ಳತನ ಮಾಡುವ ಉದ್ದೇಶದಿಂದ ಧರ್ಮಸ್ಥಳಕ್ಕೆ ಬರುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಧರ್ಮಸ್ಥಳದ ದ್ವಾರಕ’ ಬಳಿ ಕಾದು ಕುಳಿತು, ಆರೋಪಿಗಳಾದ ಹುಬ್ಬಳ್ಳಿ ನಗರದ ಸಟಂಟ್ ನಿವಾಸಿ ಬಿ.ಬಿ.ಜಾನ್ (59) ಮತ್ತು ಆಕೆಯ ಮಗಳು ಆರತಿ @ ಮಸಾಬಿ @ ಅಸ್ಮಾ (34) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಇವರ ಮಾಹಿತಿಯಂತೆ ಹುಬ್ಬಳ್ಳಿಯ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಕಳ್ಳತನದ ಮಾಲಿನಲ್ಲಿ ಸುಮಾರು 5,32,000 ಮೌಲ್ಯದ 76 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.








