

ಜೈಪುರ: ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಐವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದು, ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿನ ಮುಂಬೈ-ದಿಲ್ಲಿ ಹೆದ್ದಾರಿಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರು ವೈಷ್ಣೋದೇವಿ ತೀರ್ಥ ಯಾತ್ರೆಯನ್ನು ಮುಗಿಸಿಕೊಂಡು ಮರಳುವಾಗ ಬುಧವಾರ ರಾತ್ರಿ ಮೌಜ್ ಪುರ್ ಬಳಿ ಈ ಘಟನೆ ನಡೆದಿದೆ.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು ಹಾಗೂ 15 ನಿಮಿಷಗಳೊಳಗೆ ಬೆಂಕಿಯ ಜ್ವಾಲೆಗಳನ್ನು ನಿಯಂತ್ರಿಸಲಾಯಿತು. ಆದರೆ, ಅಷ್ಟು ಹೊತ್ತಿಗೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ರಘುವಂಶಿ ತಿಳಿಸಿದ್ದಾರೆ.


ಮೃತರ ಪೈಕಿ ಮೂವರು ಮಹಿಳೆಯರು, ಓರ್ವ ಬಾಲಕಿ ಹಾಗೂ ಓರ್ವ ಪುರುಷ ಸೇರಿದ್ದಾರೆ. ಅವರೆಲ್ಲರೂ ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಕಾರು ಸಿಎನ್ಜಿ ಚಾಲಿತ ವಾಹನವಾಗಿದ್ದುದರಿಂದ ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಈ ಅವಘಡದಿಂದ ತಪ್ಪಿಸಿಕೊಳ್ಳಲು ಸಮಯಾವಕಾಶ ದೊರೆತಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕೈಲಾಶ್ ಜಿಂದಾಲ್ ತಿಳಿಸಿದ್ದಾರೆ.“
ವಾಹನದಿಂದ ಕೇವಲ ಅಸ್ಥಿಪಂಜರದ ಅವಶೇಷಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಡಿಎನ್ಎ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಸಂರಕ್ಷಿಸಿಡಲಾಗಿದೆ. ಅವರ ಗುರುತು ಪತ್ತೆ ಹಚ್ಚಲು ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುವುದು” ಎಂದು ಅವರು ಹೇಳಿದ್ದಾರೆ.ಕಾರು ಚಾಲಕನೆಂದು ಹೇಳಲಾಗಿರುವ ವಿನೋದ್ ಕುಮಾರ್ ಮೆಹರ್, ಕಾರಿನಿಂದ ಹೊರಗೆ ಜಿಗಿಯವಲ್ಲಿ ಯಶಸ್ವಿಯಾಗಿದ್ದರೂ, ಆತ ಶೇ. 80ರಷ್ಟು ಸುಟ್ಟು ಗಾಯಗಳಿಗೆ ತುತ್ತಾಗಿದ್ದಾನೆ. ಆತನನ್ನು ಆರಂಭದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಸುಧಾರಿತ ಚಿಕಿತ್ಸೆಗಾಗಿ ಆತನನ್ನು ಜೈಪುರ್ ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








