




ಬೆಂಗಳೂರು: ರಾಜ್ಯ ಬಿಜೆಪಿಯ ಮಾಜಿ ಕಾರ್ಯದರ್ಶಿ ಜಗದೀಶ್ ಹಿರೇಮನಿ (55) ಬುಧವಾರ ಬೆಳಗ್ಗೆ 10:30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಗದೀಶ್ ಹಿರೇಮನಿ ಅವರು ಬಿಜೆಪಿಯ ಮಾಜಿ ಕಾರ್ಯದರ್ಶಿ ಆಗಿದ್ದು, ಹಾಲಿ ಎಸ್ಐಆರ್ ಆಗಿ ಕರ್ತವ್ಯ ನಿರ್ವಹಿಸಿದ್ರು. ರಾಜ್ಯ ಬಿಜೆಪಿ ಪ್ರಬಲ ರಾಜಕಾರಣಿಯನ್ನ ಕಳೆದುಕೊಂಡಿದ್ದು, ತೀವ್ರ ನಷ್ಟ ಉಂಟಾಗಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಜಗದೀಶ್ ಹಿರೇಮನಿ ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ಇವರ ಕಾರ್ಯ ಗುರುತಿಸಿಯೇ ರಾಜ್ಯ ಬಿಜೆಪಿ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಅನೇಕ ಕಿರಿಯ ನಾಯಕರಿಗೆ ಜಗದೀಶ್ ಹಿರೇಮನಿ ದಾರಿ ತೋರಿದ್ರು. ಸಜ್ಜನ ರಾಜಕಾರಣಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೂಲತಃ ಬಾಗಲಕೋಟೆಯವರಾದ ಜಗದೀಶ್ ಹಿರೇಮನಿ ಎಬಿವಿಪಿ ಮೂಲಕ ವಿದ್ಯಾರ್ಥಿ ದಿಸೆಯಲ್ಲಿ ಸಾರ್ವಜನಿಕ ಜೀವನ ಪ್ರವೇಶಿಸಿದರು. ಕೇಂದ್ರ ಸರಕಾರದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಪ್ರಶಿಕ್ಷಣ ವಿಭಾಗದ ಸಂಚಾಲನಾ ತಂಡದಲ್ಲಿದ್ದರು.
ಇಂದು ಅಪರಾಹ್ನ 2ರಿಂದ ಸಂಜೆ 4ರವರೆಗೆ ಮಲ್ಲೇಶ್ವರದಲ್ಲಿರುವ ಬಿಜೆಪಿಯ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಅವರ ಹುಟ್ಟೂರಾದ ಬಾಗಲಕೋಟೆಗೆ ಕೊಂಡೊಯ್ಯಲಾಗುತ್ತದೆ. ಗುರುವಾರ ಬಾಗಲಕೋಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.








