


ಉತ್ತರ ಪ್ರದೇಶ್: 25ರ ಹರೆಯದ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನು ಕೊಲೆ ಮಾಡಿದ ಘಟನೆ ಇಲ್ಲಿನ ಅಸ್ಕೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಟಾವಲಿ ಪತ್ತಿ ಪ್ರದೇಶದಲ್ಲಿ ನಡೆದಿದ್ದು, ಇದು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಆಕೆಯ ಪ್ರೇಮಕ್ಕೆ ಸಂಬಂಧಿಸಿದ ಮರ್ಯಾದೆಗೇಡು ಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ರೂಪ್ ಜಹಾನ್ (21) ಕೊಲೆಯಾಗಿರುವ ಯುವತಿಯಾಗಿದ್ದು, ತನ್ನದೇ ಗ್ರಾಮದ ಶಿವಂ ಸೈನಿ (22) ಅವರನ್ನು ಪ್ರೀತಿಸುತ್ತಿದ್ದಳು.
ತನ್ನ ಪುತ್ರನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆರೋಪಿಯ ತಂದೆ ನೌಶೇರ್, ತನ್ನ ಕುಟುಂಬಕ್ಕೆ ಅವಮಾನವನ್ನುಂಟು ಮಾಡುವ ಹುಡುಗಿಯನ್ನು ಕೊಲ್ಲುವುದೇ ಸರಿ ಎಂದು ಹೇಳಿದ್ದಾರೆ.
‘ರೂಪ್ ಅನುಚಿತವಾಗಿ ನಡೆದುಕೊಂಡಿದ್ದಳು. ಆಕೆ ಸೈನಿಯನ್ನು ಪ್ರೀತಿಸಿದ್ದು, ಆತನನ್ನು ಮದುವೆಯಾಗಲು ಬಯಸಿದ್ದಳು. ಗ್ರಾಮಸ್ಥರು ನನ್ನನ್ನು ಗೇಲಿ ಮಾಡುತ್ತಿದ್ದರು. ತನ್ನ ಕೃತ್ಯದ ಬಗ್ಗೆ ನನ್ನ ಮಗನಿಗೆ ಪಶ್ಚಾತ್ತಾಪವಿಲ್ಲ. ನಮಗೆ ಅವಮಾನವನ್ನುಂಟು ಮಾಡಿದ ಹುಡುಗಿಯನ್ನು ಕೊಲ್ಲುವುದೇ ಸರಿ. ಮಗ ಕೋಪದ ಭರದಲ್ಲಿ ಆಕೆಯನ್ನು ಕೊಂದಿದ್ದಾನೆ’ ಎಂದು ನೌಶೇರ್ ಹೇಳಿದ್ದನ್ನು ಸುದ್ದಿಸಂಸ್ಥೆ ಉಲ್ಲೇಖಿಸಿದೆ.
‘ನಾವು ಮುಸ್ಲಿಮರು, ಆತ ಸೈನಿ. ನಾವು ಈ ಮದುವೆಯನ್ನು ಮಾಡಿಸಲು ಹೇಗೆ ಸಾಧ್ಯ? ಹುಡುಗ ನಮ್ಮ ಸಮುದಾಯದವನೇ ಆಗಿದ್ದರೆ ವಿಷಯ ಬೇರೆಯಾಗಿರುತ್ತಿತ್ತು’ ಎಂದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಗುರುವಾರ ತಡರಾತ್ರಿ ಮನೆಯವರು ಎಲ್ಲರೂ ಹೊರಗೆ ಹೋಗಿದ್ದಾಗ ಜೇನ್ ಆಲಂ ತನ್ನ ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಯ 112 ಸಂಖ್ಯೆಗೆ ಕರೆ ಮಾಡಿ ಕೊಲೆಯ ಮಾಹಿತಿಯನ್ನು ನೀಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರೂಪ್ ಹಿಂದೆ ಮನೆಯನ್ನು ತೊರೆದು ಅದ್ರೋಹಾ ಜಿಲ್ಲೆಯಲ್ಲಿರುವ ತನ್ನ ಪ್ರೇಮಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು. ಗ್ರಾಮಸ್ಥರ ಮಧ್ಯಪ್ರವೇಶದ ಬಳಿಕ ಕುಟುಂಬವು ಆಕೆಯನ್ನು ಮರಳಿ ಕರೆತಂದಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ








