

ಬಂಟ್ವಾಳ: ಕಲ್ಲಡ್ಕ ಸರ್ಕಾರಿ ಶಾಲೆ ಅತ್ಯುತ್ತಮ ಶಾಲೆ ಎಂದು ಹೆಸರು ಪಡೆದಿರುವುದು ನಮ್ಮ ಗೋಳ್ತಮಜಲು ಗ್ರಾಮಕ್ಕೆ ಹೆಮ್ಮೆಯ ಸಂಗತಿ ಎಂದು ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ ಹೇಳಿದರು.
ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಯೋಗದೊಂದಿಗೆ ಬುಧವಾರ ನಡೆದ ನೂತನ ಕಟ್ಟಡದ ಭೂಮಿ ಪೂಜೆ
ಹಾಗೂ ಸಿಸಿ ಕ್ಯಾಮರ, ಶುದ್ಧ ನೀರಿನ ಘಟಕ, ಶಾಲಾ ವೆಬ್‌ಸೈಟ್‌ಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಪಂಚಾಯತ್ ವತಿಯಿಂದ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.


ಉದ್ಯಮಿ ಜಿತೇಂದ್ರ ಕೊಟ್ಟಾರಿಯವರು ಮಾತನಾಡಿ, ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕವೃಂದದ ಕನಸುಗಳಿಗೆ ಊರವರೆಲ್ಲರೂ ಬೆಂಬಲನೀಡಿದ್ದು, ಜಿಲ್ಲೆಯಲ್ಲಿಯೇ ಮಾದರಿಯಾಗಿ ಮೂಡಿಬಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಮಾತಾ ಡೆವಲಪರ್ಸ್ ಸಂಸ್ಥೆಯ ಎಂ.ಡಿ. ಸಂತೋಷ್ ಕುಮಾರ್ ಅರೆಬೆಟ್ಟು ಮಾತನಾಡಿ, ಶಾಲೆ ಎಂದರೆ ಸರ್ವಜನಾಂಗದ ಶಾಂತಿಯ ತೋಟ ವಾಗಿದ್ದು, ಇಲ್ಲಿ ಅರಳುವ ಹೂಗಳು ಸಮಾಜಕ್ಕೆ ದೊಡ್ಡ ಶಕ್ತಿಯಾಗಲಿ ಎಂದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಯಾವುದೇ ಖಾಸಗಿ ಶಾಲೆಯ ಗುಣಮಟ್ಟಕ್ಕೆ ಕಡಿಮೆ ಇಲ್ಲದ ರೀತಿಯಲ್ಲಿ ಕಲ್ಲಡ್ಕ ಶಾಲೆ ಮುನ್ನಡೆಯುತ್ತಿದೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ಅಭಿವೃದ್ಧಿಗೆ ಪೂರಕವಾಗಿ ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರ ಅತೀ ಅಗತ್ಯವಾಗಿದೆ ಎಂದರು.



ಯುವಉದ್ಯಮಿ ಉಮ್ಮರ್ ಫಾರೂಕ್, ನಾಗೇಶ್ ಕಲ್ಲಡ್ಕ ಶುಭಹಾರೈಸಿದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶಿವಶಂಕರ ಆಚಾರ್ಯ, ಅಬೂಬಕರ್ ಮುರಬೈಲು, ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್, ಅಬ್ದುಲ್ ಸಲೀಂ, ಮೋಹನದಾಸ್ ಕೊಟ್ಟಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿಸಿಕ್ಯಾಮೆರಾ ವನ್ನು ಕೊಡುಗೆಯಾಗಿ ನೀಡಿದ ಯುವ ಉದ್ಯಮಿ ಉಮ್ಮರ್ ಫಾರೂಕ್ ಹಾಗೂ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ ಶಿವಶಂಕರ ಆಚಾರ್ಯರನ್ನು ಗೌರವಿಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತೀನ್ ಕಲ್ಲಡ್ಕ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಾಲಾಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.



