Thursday, July 23, 2026
spot_imgspot_img
spot_imgspot_img

ಶಬರಿಮಲೆ ವಿಮಾನ ನಿಲ್ದಾಣ ಭೂ ಸ್ವಾಧೀನ ಪ್ರಕ್ರಿಯೆ ರದ್ದು: ಕೇರಳ ಹೈಕೋರ್ಟ್

- Advertisement -
- Advertisement -

ಕೊಚ್ಚಿ: ಪ್ರಸ್ತಾವಿತ ಶಬರಿಮಲೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯ ಪ್ರಮುಖ ಹಂತಗಳನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಯೋಜನೆಗೆ ಅಗತ್ಯವಿರುವ ಕನಿಷ್ಠ ಪ್ರಮಾಣದ ಭೂಮಿಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರ್ಧರಿಸದೆ ಕಾನೂನು ಪ್ರಕ್ರಿಯೆ ಕೈಗೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಚೆರುವಳ್ಳಿ ಎಸ್ಟೇಟ್ ಸೇರಿದಂತೆ ಒಟ್ಟು 2,570 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2022 ಡಿಸೆಂಬರ್ 30ರಂದು ಹೊರಡಿಸಿದ್ದ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಅಯನಾ ಚಾರಿಟೇಬಲ್ ಟ್ರಸ್ಟ್ ಹಾಗೂ ಅದರ ವ್ಯವಸ್ಥಾಪಕ ಟ್ರಸ್ಟಿ ಡಾ. ಸಿನಿ ಪುನ್ನೂಸ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಸಿ. ಜಯಚಂದ್ರನ್, 2013ರ ಭೂಸ್ವಾಧೀನ ಕಾಯ್ದೆಯಡಿ ಕೈಗೊಳ್ಳಲಾದ ನಿರ್ಧಾರ ಪ್ರಕ್ರಿಯೆ ಕಾನೂನುಬದ್ಧವಾಗಿ ದೋಷಪೂರಿತವಾಗಿದೆ ಎಂದು ತೀರ್ಪು ನೀಡಿದರು.


ಡಿಸೆಂಬರ್ 19ರಂದು ನೀಡಿದ ಆದೇಶದಲ್ಲಿ, ಯೋಜನೆಗೆ ಅಗತ್ಯವಿರುವ ಅತೀ ಕನಿಷ್ಠ ಭೂಮಿಯ ಅವಶ್ಯಕತೆಯನ್ನು ಮರುಪರಿಶೀಲಿಸಲು ಹೊಸ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸಿ, ತಜ್ಞರ ಸಮಿತಿಯಿಂದ ಮರುಮೌಲ್ಯಮಾಪನ ಮತ್ತು ನಂತರ ಸರ್ಕಾರದಿಂದ ಪುನರ್ವಿಮರ್ಶೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.


ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಸಾಧ್ಯವಾದರೂ, ಅಗತ್ಯವಿರುವ ಕನಿಷ್ಠ ಭೂಮಿಯನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕು ಎಂಬ ಕಾನೂನು ಬಾಧ್ಯತೆಯನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪರಿಣಾಮವಾಗಿ ಸಾಮಾಜಿಕ ಪರಿಣಾಮ ಮೌಲ್ಯಮಾಪನ ವರದಿ, ತಜ್ಞರ ಸಮಿತಿ ವರದಿ ಹಾಗೂ ಸ್ವಾಧೀನಕ್ಕೆ ಅನುಮೋದನೆ ನೀಡಿದ ಸರ್ಕಾರಿ ಆದೇಶಗಳನ್ನು ಅಮಾನ್ಯವೆಂದು ಘೋಷಿಸಿ, ಸೆಕ್ಷನ್ 11 ಅಧಿಸೂಚನೆಯನ್ನು ಕೂಡ ರದ್ದುಗೊಳಿಸಲಾಗಿದೆ.


ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಅಂತಿಮ ತೀರ್ಮಾನವನ್ನು ನ್ಯಾಯಾಲಯ ನೀಡದೆ, ಕನಿಷ್ಠ ಭೂಮಿ ನಿರ್ಧಾರವಾದ ಬಳಿಕ ಆ ವಿಷಯ ಪರಿಶೀಲಿಸಬಹುದು ಎಂದು ತಿಳಿಸಿದೆ. ಜೊತೆಗೆ, ವಿಮಾನ ನಿಲ್ದಾಣದಂತಹ ತಾಂತ್ರಿಕವಾಗಿ ಸಂಕೀರ್ಣ ಯೋಜನೆಗಳಿಗೆ ಸಾಮಾಜಿಕ ಪರಿಣಾಮ ಮೌಲ್ಯಮಾಪನ ತಂಡದಲ್ಲಿ ತಾಂತ್ರಿಕ ತಜ್ಞರನ್ನು ಸೇರಿಸಿಕೊಳ್ಳಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.

- Advertisement -

Related news

error: Content is protected !!