
ಲಕ್ನೋ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಲಕ್ಷ್ಮೀ-ದೆಹಲಿ ಮಾರ್ಗದಲ್ಲಿ ಸಾಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾಗವತ್ ಅವರು ಮೀರತ್‌ಗೆ ತೆರಳುತ್ತಿದ್ದಾಗ, ಹಾರ್ದೋಯ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ನಡೆದ ಈ ಕಲ್ಲು ತೂರಾಟದಿಂದ ರೈಲಿನ ಕಿಟಕಿಗೆ ಸಣ್ಣಪುಟ್ಟ ಹಾನಿಯಾಗಿದೆ. ಘಟನೆಯಲ್ಲಿ ಭಾಗವತ್ ಅವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಕಲ್ಲು ತೂರಾಟ ಪ್ರಕರಣದ ಕುರಿತು ರೈಲ್ವೆ ಪೊಲೀಸ್ ವಿಶೇಷ ತಂಡವು ತನಿಖೆ ನಡೆಸುತ್ತಿದೆ. ಘಟನೆ ಬಳಿಕ, ಮೋಹನ್ ಭಾಗವತ್ ಅವರು ರಾತ್ರಿ 9 ಗಂಟೆ ಸುಮಾರಿಗೆ ಬಿಗಿ ಭದ್ರತೆಯಲ್ಲಿ ಮೀರತ್ ರೈಲು ನಿಲ್ದಾಣದಲ್ಲಿ ಇಳಿದರು. ಅಲ್ಲಿಂದ ಅವರು ಶತಾಬಿ ನಗರದ ಮಾಧವ್ ಕುಂಜ್‌ನಲ್ಲಿರುವ ತಮ್ಮ ತಂಗುದಾಣಕ್ಕೆ ತೆರಳಿದರು.
ಮೋಹನ್ ಭಾಗವತ್ ಅವರು ಇಂದು ಮತ್ತು ನಾಳೆ ಮೀರತ್‌ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರೀಡಾಪಟುಗಳು ಮತ್ತು ಬುದ್ದಿಜೀವಿಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.








