Friday, July 24, 2026
spot_imgspot_img
spot_imgspot_img

ಮಡಿಕೇರಿ: ಕಾಡಾನೆ ದಾಳಿಗೆ ಮಹಿಳೆ ಬಲಿ-ಗ್ರಾಮಸ್ಥರ ಆಕ್ರೋಶ

- Advertisement -
- Advertisement -

ಮಡಿಕೇರಿ: ಹಾಡಹಗಲೇ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿಯಲ್ಲಿ ಘಟಿಸಿದೆ.

ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಹಾಡಿಯ ವಾಸಿ ಜಲಜಾಕ್ಷಿ ಮೃತ ದುರ್ದೈವಿ. ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ತಮ್ಮ ಕುಲಕಸುಬು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆಂದು ತಮ್ಮ ಮನೆಯಂಗಳದ ಆಸುಪಾಸಿನ ಅರಣ್ಯಕ್ಕೆ ತೆರಳಿ ಸೀಗೆ ಹೆರಕುತ್ತಿದ್ದಾಗ ಏಕಾಏಕಿ ಧಾವಿಸಿದ ಕಾಡಾನೆ ಒಂದೇ ಸಮನೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕುಶಾಲನಗರ ಅರಣ್ಯಾಧಿಕಾರಿಗಳು ಧಾವಿಸಿ ಮಹಜರು ನಡೆಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕುಶಾಲನಗರ ಆಸ್ಪತ್ರೆಯ ಶವಾಗಾರಕ್ಕೆ ಒಯ್ಯಲಾಗಿದೆ.

ಘಟನೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಭಾಗದಲ್ಲಿ ದಿನನಿತ್ಯ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಮನೆಯಿಂದ ಯಾರೂ ಹೊರಗೆ ಬರದೇ ಇರುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಮುಂದಾಗುವುದಿಲ್ಲ. ಹೀಗಾಗಿ ದಿನನಿತ್ಯ ಪ್ರಾಣಭಯದಲ್ಲೇ ಓಡಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!