Monday, May 6, 2024
spot_imgspot_img
spot_imgspot_img

ಭಾವನೆಗಳ ಸಾಕಾರ ಓಂಕಾರ ಮಂತ್ರ

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು

‘ಓಂ’ ಕಾರ ಮಂತ್ರದಿಂದ ಸಮಸ್ತ ನರನಾಡಿಗಳನ್ನು ಕ್ರಿಯಾಶೀಲವನ್ನಾಗಿಸಲು ಸಾಧ್ಯವಿದೆ. ಭಾವನೆಗಳನ್ನು ಅದುಮಿಡಲು ಈ “ಓಂ” ತುಂಬಾ ಸಹಕಾರಿಯಾಗಿದೆ. ಹುಬ್ಬಿನ ನಡುವೆ ಮನಸ್ಸನ್ನು ಕೇಂದ್ರೀಕರಿಸಿ, ಕಣ್ಣುಮುಚ್ಚಿ ಧ್ಯಾನಿಸಿದಾಗ ದೇವರ ರೂಪ ಮೂಡುತ್ತದೆ. ಉಸಿರು ನಿಧಾನ ಹಾಗೂ ದೀರ್ಘವಾಗಿ ತಕೊಂಡು ಉಸಿರನ್ನು ಹೊರ ಬಿಡುವಾಗ ಈ ‘ಓಂ ನ್ನು ಸಮಾಂತರವಾಗಿ ಹೇಳಬೇಕು. ಓ………… ಮ್……………

ಈ ರೀತಿ ಪಠಿಸುವಾಗ ಮನಸ್ಸು”ಓ” ಹೇಳುವಲ್ಲಿ ನೇರವಾಗಿ ನಿಧಾನವಾಗಿ ಚಲಿಸುತ್ತಾ ‘ಮ್ ‘ ಕಾರದಲ್ಲಿ ಕೆಳಮುಖವಾಗಿ ಸಾಗುತ್ತದೆ. ದೇಹದ ಅವಯವಗಳು ಅಂತರ್ದೃಷ್ಟಿಗೆ ಆಗ ಗೋಚರವಾಗುತ್ತದೆ. ಉಸಿರಿನ ಪ್ರಕ್ರಿಯೆ ನೈಜ ಆನಂದವನ್ನು ತರುತ್ತದೆ. ಆಗ ಓಂಕಾರನಾದ ಶಿವ ದರ್ಶನ ಅಂತರಂಗದಲ್ಲಿ ಆವಿರ್ಭವಿಸುತ್ತದೆ. ಮನಸ್ಸು ಆಗಲೇ ಪ್ರಫುಲ್ಲಚಿತ್ತಗೊಳ್ಳತೊಡಗುತ್ತದೆ. ಜೀವನದಲ್ಲಿ ಇದಕ್ಕಿಂತ ಬೇರೇನು ಬೇಕು? ಅಂತರಂಗದಲ್ಲಿ ಜಗನ್ನಿಯಾಮಕನು ಯಾವಾಗಲೂ ಕಾಣಸಿಗುವ ಈ ಬಗೆಗೆ ಯಾವ ಪ್ರಶಸ್ತಿಗಳೂ ಬೇಕಾಗಿಲ್ಲ. ಪುರಸ್ಕಾರಗಳೂ ಅಗತ್ಯವಿಲ್ಲ. ಆನಂದಪಡುವ ಭಾವೋನ್ಮಾದವೇ ಈ ಜೀವನಕ್ಕೆ ಸ್ಫೂರ್ತಿಯನ್ನೀಡುತ್ತದೆ.

ಮನಸ್ಸು ತುಂಬ ಸೂಕ್ಷ್ಮ. . ಅದಕ್ಕೆ ನೋವು ಯಾರಿಂದಲಾದರೂ ಒಮ್ಮೆ ಆಯಿತೋ, ಅಮೇಲೆ ಅವರನ್ನು ದಿನಂಪ್ರತಿ ನೋಡುವಾಗಲೂ ಆ ನೋವೇ ನೆನಪಾಗಿ ಕಾಡುತ್ತಿರುತ್ತದೆ. ಅವರು ಆಮೇಲೆ ಎಷ್ಟೇ ಒಳ್ಳೆಯವರಾಗಿದ್ರೂ ನೋವು ತಿಂದ ಮನಸ್ಸು ಅವರನ್ನು ಪ್ರತ್ಯೇಕವಾಗಿಯೇ ಇರಿಸುತ್ತದೆ. ತೂಕ ಮಾಡುವ ಕಲ್ಲು ಮತ್ತು ಯಾವುದೇ ಪದಾರ್ಥವು ತಕ್ಕಡಿಯಲ್ಲಿ ಒಂದೇ ತಟ್ಟೆಯಲ್ಲಿ ತೂಗಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ. ಜೀವನದ ತಕ್ಕಡಿಯಲ್ಲಿ ಕೆಲವು ಲೋಪದೋಷಗಳಿದ್ದಾಗ್ಯೂ ಅದನ್ನು ತಿಳಿ ಹೇಳಿ ಪರಿಹರಿಸಿಕೊಳ್ಳುವುದು ಒಳಿತಿಗೆ ನಾಂದಿ. ಅದು ಬಿಟ್ಟು ಆನೆ ನಡೆದದ್ದೇ ದಾರಿ ಎಂದು ಬಿಗುಮಾನ ಮಾಡಿದರೆ ಬದುಕು ಅಸ್ಪಷ್ಟವಾಗುವುದು. ಗೋಡೆಯ ಬಿರುಕಿನಂತೆ ಸದಾ ಕಾಣುತ್ತಿರುವುದು.

ಹಾಗಾಗಿ ತಿಳಿದೂ ತಿಳಿದು ಯಾರಿಗೂ ಮನಸ್ಸಿಗೆ ನೋವು ಮಾಡದಿರುವುದೇ ಉತ್ತಮ. ಒಂದು ವೇಳೆ ಮಾಡಿದ್ದರೂ ಯಾವ ಕಾರಣಕ್ಕೆ ಎಂದು ನೋವು ಕೊಟ್ಟ ಸಂದರ್ಭವನ್ನು ಚಾಚೂ ತಪ್ಪದೇ ತಿಳಿ ಹೇಳಲ್ಪಟ್ಟರೆ! ಆಗ ಕ್ಷಮೆಯ ದಾರಿಗೆ ಸನಿಹ ಸಾಗಿದ ತೃಪ್ತಿ ದೊರಕಬಹುದು. ಒಬ್ಬರ ಬದುಕು ನೆಲೆಯಾಗಲು ಇನ್ನೊಬ್ಬರ ಬದುಕಿಗೆ ಕೊಳ್ಳಿಯಿಡಬಾರದು. ಅದು ಸವಾಲು ಎಂಬಂತೆ ಆಗ ಬಂದದ್ದನ್ನು ಎದುರಿಸುವ ಹೊಣೆ ಹೊರಬೇಕೇ ಹೊರತು ಇತರರ ಬದುಕು ರೌರವ ಮಾಡಿ ತಾನೂ ಅದರೊಳಗೆ ಬೆಂಕಿಯ ಕುಲುಮೆಯಲ್ಲಿ ಬೇಯುವಂತಾಗಬಾರದು.

ಸತ್ಯದರ್ಶನದ ಅರಿವು ಇಂಥಾ ವಿಷಯಗಳಲ್ಲೇ ಅನಾವರಣಗೊಳ್ಳಲ್ಪಡುವುದು. ನೋವು ತಿಂದ ಮನಸ್ಸು ಬರ ಬರುತ್ತ ನೋವನ್ನೇ ಹೊರಹಾಕುವ ಸಾಧ್ಯತೆ ಹೆಚ್ಚಿರುತ್ತದೆ.. ಹೀಗಾಗಿ ಬದುಕಲ್ಲಿ ಯೋಚಿಸಿ ಮುನ್ನಡೆಯಬೇಕಾದ ಅಗತ್ಯ ಬಹಳವಿದೆ. ಕಾಣದ ದೇವರು ಹೀಗೆ ಮಾಡಲು ಬುದ್ಧಿ ಕೊಟ್ಟ ಎಂದು ಸಮಜಾಯಿಸಿ ಹೇಳುವವರಿಗೇನೂ ಕಡಿಮೆಯಿಲ್ಲ. ಆದರೆ ಅದು ಅರಿವಾಗುವ ಹೊತ್ತಿಗೆ ಬದುಕು ಸಮುದ್ರದ ತೆರೆಗಳ ನಡುವೆ ಏರಿಳಿಯುತ್ತ ಸಾಗುತ್ತಿರುತ್ತದೆ. ಅತ್ತ ಹಿಂತಿರುಗಲೂ ಆಗದೇ ಇತ್ತ ಮುಂದೆ ಸಾಗಲೂ ಆಗದೇ ಅತಂತ್ರ ಸ್ಥಿತಿಗೆ ಕಾರಣವಾಗುತ್ತದೆ. ಆಗಲೇ ನೆನಪಾಗುವ ದೇವರ ಧ್ಯಾನದಲ್ಲಿ ಗಟ್ಟಿ ನೆಲೆ ಕಾಣುವ ಸುಯೋಗ ಒದಗಿದರೆ ಬದುಕು ನಿರಾಳವಾಗುತ್ತದೆ.

ಕಾಲವನ್ನು ತಡೆಯುವವರು ಯಾರು ಇಲ್ಲ, ಮತ್ತೆ ಯಾರಂದ್ರು ತಡೆಯೋಕೆ ಆಗುತ್ತೆಂದು? ಒಮ್ಮೊಮ್ಮೆ ಕುಳಿತುಕೊಂಡಿರುವಾಗ ಕಾಲದ ಕೀ ಮುಗಿದು ನಿಂತೇ ಬಿಟ್ಟಿದೆ ಅಂದು ಕೊಂಡರೆ ಇನ್ನು ಕೆಲವೊಮ್ಮೊಮ್ಮೆ ಕುದುರೆಯ ಕಾಲಿಗೆ ಕಾಲವನ್ನು ಕಟ್ಟಿಬಿಟ್ಟ ಹಾಗೆ ಸೋಲೇ ಇಲ್ಲದ ಸರದಾರನಂತೆ ಮುಂದೆ ಓಡುವ ಭರಕ್ಕೆ ಮುಗ್ಗರಿಸಿ ಬಿದ್ದು ಹಲ್ಲು ಕಳೆದುಕೊಂಡ ಮಗುವಿನಂತೆ ಒದ್ದಾಡುತ್ತೇವೆ. ಯಾಕೆ ಹೀಗೆ ಆಗುತ್ತಿದೆಯೆಂದು ನಿಧಾನವಾಗಿ ಗಮನಿಸಿದಾಗ ನಡೆಯುವ ದಾರಿಯಲ್ಲಿ ಕಲ್ಲುಗಳೇ ಅವಸರವಸರವಾಗಿ ಕಂಡುಕೊಳ್ಳುತ್ತ ಅದನ್ನೇ ರೂಬಿ ವಜ್ರಗಳೆಂದು ತಿಳಿದು ತಬ್ಬಿಬ್ಬಾಗುತ್ತೇವೆ.

ಅಪಘಾತಕ್ಕೆ ಅವಸರವೇ ಕಾರಣವೆಂದು ತಿಳಿದಿದ್ದರೂ ಸರಿಪಡಿಸಿಕೊಳ್ಳಲು ಕೂಡಾ ಆಗದಷ್ಟು ಅವಸರದಲ್ಲೇ ಹೆಜ್ಜೆಯಿಡುವಂತಾಗಿದೆ. ನಿದ್ದೆಯಿಂದ ಯಾರನ್ನಾದರೂ ಎಬ್ಬಿಸಬಹುದು. ಆದರೆ ನಿದ್ದೆ ಮಾಡುವವರಂತೆ ನಟನೆ ಮಾಡುವವರನ್ನು ಯಾರಿಂದಲೂ ಎಬ್ಬಿಸಲು ಸಾಧ್ಯವಿಲ್ಲ. ಅಂತಹವರಿಂದ ಒಳ್ಳೆಯ ಫಲಿತಾಂಶದ ನಿರೀಕ್ಷೆಯೂ ಸಲ್ಲ. ಸಾಗುವ ಗುರಿಯ ದಾರಿಯಲ್ಲಿ ಎಡರುತೊಡರುಗಳನ್ನು ಬಿಡಿಸಲು ಬೇಕಾದ ಉಪಕರಣಗಳನ್ನು ಇಟ್ಟುಕೊಂಡಾಗ ಮಾತ್ರ ದಾರಿ ಸುಲಲಿತವಾಗುವುದು. ಅದು ಬಿಟ್ಟು ಇನ್ನೊಬ್ಬರು ಹತ್ತಿದ ಏಣಿಯಲ್ಲಿ ಎಷ್ಟು ದಿನ ಹತ್ತಲು ಸಾಧ್ಯ. ಅದು ಸಂಭವನೀಯತೆಯಾಗಿದ್ದರೂ ತಮ್ಮ ಏಣಿಯ ತಯಾರಿ ಅತ್ಯಂತ ಶ್ರೇಷ್ಠವೇ ಆಗಬಹುದಲ್ಲ. ಅವರವರ ತಲೆಗೆ ಅವರವರ ಕೈಯೇ ಹೊರತು ಇತರರ ಕೈಗೆ ಇಡಲಾಗದು.

ಸಾಧನೆಯೆಂಬುದು ಬದುಕಿನ ಬಯಲನ್ನು ವಿಶಾಲವಾಗಿ ಇರಿಸಬಲ್ಲುದು. ಅದೇ ರೀತಿ ತಾಳ್ಮೆಯೆಂಬುದು ದೇವರೊಲುಮೆಗೆ ಧ್ಯಾನಗೈಯ್ಯಲು ಪ್ರೇರಣೆಯಾಗಬಹುದು. ಅರಿತು ಬಾಳುವ ಈ ಬಾಳುವೆಯೆಂಬುದು ನೀರಿನೊಳಗಿನ ಮೀನಿನ ಹೆಜ್ಜೆಯಂತೆ ಅಗೋಚರವೇ ಹೌದು. ಆದರೂ ನೀರಿದ್ದಲ್ಲಿ ಮೀನುಗಳು ಇರಲುಬಹುದು ಇಲ್ಲದಿರಲೂಬಹುದು. ನೀರಿರುವ ಪಾತ್ರವನ್ನು ಹೊಂದಿಕೊಂಡಿರುತ್ತದೆ. ಜಲಪಾತದಲ್ಲಿ ಮೀನುಗಳು ಈಜಲಾರವು. ಅದೇ ಕೆಳಗೆ ಹರಿವ ನೀರಲ್ಲಿ ಸಿಗಬಹುದು. ಪರಿಸ್ಥಿತಿಗೆ ಹೊಂದಿಕೊಂಡು ಬಾಳುವ ಕಲೆ ಅರಿತಾಗ ಬದುಕು ನೀರಿನಂತೆಯೇ ಅಗುವುದರಲ್ಲಿ ಎರಡು ಮಾತಿಲ್ಲ.

ಲೋಟಕ್ಕೆ ಹಾಕಿದಾಗ ಲೋಟದ ರೂಪ, ಬಿಂದಿಗೆಯ ನೀರು ಬಿಂದಿಗೆಯ ರೂಪ, ಕೆರೆಯ ನೀರು ಕೆರೆಯ ರೂಪ ಹೀಗೆ ನಾನಾ ಪ್ರಕಾರಗಳಲ್ಲಿ ಆ ಪ್ರಕಾರದ ರೂಪವೆ ಕಾಣುವಂತೆ ಮನುಷ್ಯರ ಜೀವನವೂ ಅವರವರ ಪಾತ್ರಗಳಿಗನುಸಾರವಾಗಿ ಸಾಗುತ್ತ ಬದುಕಲು ಯೋಗ್ಯವಾಗುತ್ತದೆ. ಅದಕ್ಕೆ ದೈವೀಕೃಪೆಯೆಂದು ಕರೆಯುತ್ತೇವೆ. ನಾವು ಇಚ್ಛಿಸಿದ ರೀತಿ ಸಾಗುವುದು ಬದುಕಲ್ಲ. ಈ ಕ್ಷಣ ಮಾತ್ರ ನಮ್ಮದು.ಮುಂದಿನದು ಶ್ರೀ ಮಹಾಲಿಂಗೇಶ್ವರನಿಚ್ಛೆ. ಅವನಿರುವ ಈ ಅವನಿ ಎಂದೆಂದಿಗೂ ಪಾವನಿಯೇ ಹೌದು. ಈ ಅವನಿಯಲ್ಲಿ ಬದುಕು ಸಾಗಿಸಲು ಮಾತ್ರ ನಮಗಿದೆ ಹಕ್ಕು. ಉಳಿದೆಲ್ಲವೂ ಆತನದೇ ಸೊತ್ತು. ಈ ಮಹಾಶಿವರಾತ್ರಿ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ. ಓಂಕಾರನಾದ ಪ್ರತಿ ದಿನ ಪ್ರತಿಕ್ಷಣವೂ ಮನದೊಳಗೆ ಅನುರಣಿಸುತ್ತಿರಲಿ. ಮಹಾಮಂಗಳವಾಗಲಿ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು

- Advertisement -

Related news

error: Content is protected !!