Tuesday, April 30, 2024
spot_imgspot_img
spot_imgspot_img

ಮನಸ್ಸು ಹೊಸತನದಿಂದ ಗೆಲುವಿನ ಹಾದಿಯನ್ನು ಹಿಡಿಯುವ ಹೊಸ ಶೀರ್ಷಿಕೆ..! ಕ್ಷಣವೂ ನಮ್ಮದಲ್ಲ!

- Advertisement -G L Acharya panikkar
- Advertisement -

ಬದುಕೆಂದರೆ ಬರಿಯ ನಗುವೊಂದೇ ಅಲ್ಲ. ನಮ್ಮ ದೇಶದಲ್ಲಿ ಸುಮಾರು 130 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇರುವಂತಹದ್ದು ಏನು ಸಾಮಾನ್ಯದ್ದಲ್ಲ. ಇಲ್ಲಿ ಎಲ್ಲ ಬಗೆಯ ಕಷ್ಟ ನಷ್ಟ ಅನ್ಯಾಯ ಅಧರ್ಮಗಳು ಆಗುತ್ತಲಿವೆ. ಈ ಭೂಮಿ ಕರುಣಾಪೂರಿತೆಯೆಂದರಿತು ಎಲ್ಲೆಂದರಲ್ಲಿ ಕಬಳಿಸುವುದರಲ್ಲೇ ಜೀವನ ಕಳೆಯುತ್ತಿರುವವರೂ ಇದ್ದಾರೆ. ಆದರೆ ಭೂಮಿ ತಾಯಿ ಎಷ್ಟು ದಿನ ಸಹಿಸಿಯಾಳು. ಭಾರ ಹೊರುವವರು ಸುಮಾರು ಅರ್ಧತಾಸು ಹೊರಬಹುದು. ಅದಕ್ಕಿಂತ ಹೆಚ್ಚು ಅಂದ್ರೆ ಒಂದು ದಿನ ಹೊರಬಹುದೇನೋ ಆದರೂ ಕಷ್ಟ. ಈ ಭೂಮಿ ತಾಯಿ ನಮ್ಮನ್ನೆಲ್ಲ ಪ್ರೀತಿಯಿಂದ ಸಲಹುವವಳು. ಆದರೆ ಮನುಷ್ಯರು ಎಂದಾದರೂ ಅದರ ಬಗ್ಗೆ ಚಿಂತಿಸಿದ್ದುಂಟೇ? ಅಕೆಯ ಸಂರಕ್ಷಣೆಯ ಭಾರ ಯಾರಿಗೂ ಅರಿವಾಗುತ್ತಿಲ್ಲ.

ಹಚ್ಚ ಹಸುರಿನ ಸೀರೆಯುಟ್ಟು ನಳನಳಿಸುವ ತಾಯಿಗೆ ಈಗೀಗ ಪ್ಲಾಸ್ಟಿಕ್‌ಗಳ ಅಲಂಕಾರದಲ್ಲೇ ಸಾರ್ಥಕ್ಯವನ್ನು ಕಾಣಿಸುತ್ತಿದ್ದೇವೆ. ಎಲ್ಲೆಂದರಲ್ಲಿ ಗೊತ್ತುಗುರಿಯಿಲ್ಲದೇ ಪ್ಲಾಸ್ಟಿಕ್ ಗಳನ್ನು ಬಿಸಾಡಿ ಏನೂ ಅರಿಯದ ಸೊಬಗರಂತೆ ಮುಖವಾಡ ಹಾಕಿಕೊಳ್ಳುವುದೇ ಬದುಕಾಗಿದೆ. ಏಣಿ ಹತ್ತಿದವ ಕೆಳಗೆ ಇಳಿಯಲೇಬೇಕು. ಈ ಮಣ್ಣು ಸೇರಲೇಬೆಕು. ಹಾಗಾಗಿ ಮಣ್ಣನ್ನು ಕೊಂಚವಾದರೂ ಶುದ್ಧಿಯಾಗಿರಿಸಿಟ್ಟುಕೊಂಡಲ್ಲಿ ಮಾನವಕುಲಕ್ಕೆ ಹಿತವಾಗಬಹುದು. ಇಲ್ಲವಾದಲ್ಲಿ ಪ್ರಸ್ತುತ ಎದುರಿಸುತ್ತಿರುವ ಅನಾಹುತಗಳು ಇನ್ನಷ್ಟು ಭೀಕರವಾಗಬಹುದು. ಹಾಗಾಗಿ ಇನ್ನಾದರೂ ಪ್ರಕೃತಿಗೆ ಒಳಿತಾಗುವಂತಹ ಕಾರ್ಯಗಳನ್ನು ಮಾಡಬೇಕಾಗಿದೆ.

ಆಗ ತಾನೇ ಗಿಡ ಮರಗಳು ಅಲ್ಲಾಡುತ್ತ ತಮ್ಮ ಇರುವಿಕೆಯನ್ನು ನಿಧಾನವಾಗಿ ತೋರ್ಪಡಿಸುತ್ತ ಪವನನೊಂದಿಗೆ ಸರಸಕ್ಕಿಳಿದಂತೆ ಭಾಸವಾಗುತ್ತಿತ್ತು. ಆ ಅನುಭವವೇ ಮನುಷ್ಯರಿಗೆ ನವಚೇತನ ದೊರಕಿದಂತಾಗುವುದು. ಸುತ್ತಮುತ್ತಲಿನಿಂದ ಬರುವ ತಂಪಾದ ಸುಯ್ ಎನ್ನುವ ತಂಗಾಳಿಗೆ ಮೈಯೊಡ್ಡಿ ಕುಳಿತುಕೊಂಡಾಗ ಇಹವೇ ಮರೆತುಹೋಗಿ ಅನಿರ್ವಚನೀಯ ಆನಂದವು ದೊರಕುವುದು. ಹಾಗಾಗಿ ಮರಗಿಡಗಳೊಂದಿಗೆ ಒಂದಾಗಿ ಜೊತೆಯಾಗಿ ಬಾಳುವುದನ್ನು ಕಲಿಯಬೇಕು. ನಮ್ಮ ಇರುವಿಕೆ ಗಿಡಮರಗಳಿಗೂ ಸಂತೋಷ ಕೊಡುವುದು ದಿಟ. ಮನೆಯ ಹತ್ತಿರವಿರುವ ಗಿಡಮರಗಳನ್ನು ವೀಕ್ಷಿಸಿ ಅವು ಹೇಗೆ ಚೆನ್ಬಾಗಿ ಬೆಳೆಯುವುದೆಂದು ಸೂಕ್ಷ್ಮವಾಗಿ ಗಮನಿಸಿ. ಅದಕ್ಕೂ ಮನುಷ್ಯರ ನಂಟು ಸಂತೋಷವನ್ನು ನೀಡುತ್ತದೆ. ಹೂವಿನ ಅಥವಾ ಯಾವುದೇ ಗಿಡವನ್ನೇ ಆಗಲಿ ಸ್ಪರ್ಶಿಸಿದಾಗ ಅದಕ್ಕೂ ಮಮತೆಯುಕ್ಕುತ್ತದೆ. ಸಾಕುಪ್ರಾಣಿಗಳು ಹೇಗೆ ನಮ್ಮ ಪ್ರೀತಿಗಾಗಿ ಹಂಬಲಿಸುತ್ತವೋ ಅದೇ ರೀತಿ. ಪ್ರಕೃತಿಯಿಂದ ದಿನಂಪ್ರತಿ ಪಾಠ ಕಲಿಯುವುದು ಬೇಕಾದಷ್ಟಿದೆ. ಹಾಗೂ ನವೀನರೀತಿಯಲ್ಲಿರುತ್ತದೆ ಎಂಬುದು ಒಂದೆರಡು ದಿನಗಳಲ್ಲಿಯೇ ಅರಿವಾಗುತ್ತದೆ. ಜೀವನಪೂರ್ತಿ ಆ ಅನುಭವವು ಕಲಿಯುವ ವಿದ್ಯೆಯಂತೆ ಸದಾ ಹೊಸತಾಗಿರುತ್ತದೆ. ಹಾಗಾಗಿ ಈ ಜೀವನದಲ್ಲಿ ಎಲ್ಲೂ ಯಾವತ್ತೂ ಕಲಿತಾಯಿತು ಎಂಬ ಪ್ರಶ್ನೆಯೇ ಬರುವುದಿಲ್ಲ.

ಮಾಡೋದಕ್ಕೆ ಕೈತುಂಬಾ ಕಾರ್ಯಗಳಿರುವಾಗ ಕೆಲವೊಮ್ಮೆ ಮನಸ್ಸು ಯೋಚನೆಗೆ ತೊಡಗುತ್ತದೆ. ಹೇಗೂ ಕಾರ್ಯಗಳೇ ಪುರುಸೊತ್ತು ಇಲ್ಲದ ರೀತಿಯಲ್ಲಿ ಜೀವನದಲ್ಲಿ ಬಂದೆರಗುತ್ತಿರುತ್ತವೆ. ಮತ್ತೆ ಸಾಧನೆಯ ಹಾದಿ ಬೇರೆ ಬೇಕಾಗಿತ್ತೇ ಅಥವಾ ಅಗತ್ಯವೇ ಎಂಬ ಸಂಘರ್ಷಕ್ಕೆ ಒಳಗಾಗಿ ಸಾಧನೆಯ ಹಾದಿ ಅರ್ಧದಲ್ಲೇ ನಿಲ್ಲುವ ಪ್ರಮೇಯ ಬಂದೊದಗುವುದುಂಟು. ಆದರೆ ಕಾರ್ಯಗಳು ಅದರಷ್ಟಕ್ಕೇ ಆಗಿ ಮುಗಿಯುತ್ತವೆ. ಬೇರೆ ಕಾರ್ಯಗಳೂ ನೆರವೇರುತ್ತವೆ. ಆದರೆ ಅದರಲ್ಲಿ ನೆಮ್ಮದಿಯೆಂಬುದು ಮರುಭೂಮಿಯಲ್ಲಿ ಕಾಣುವ ಒಯಸಿಸ್ ನಂತೆ. ಮನಸ್ಸಿಗೆ ಸಿಕ್ಕರೂ ಅನುಭವಕ್ಕೆ ಸಿಗದಂತಾಗುತ್ತದೆ. ಹಾಗಾಗಿ ಮನದೊಳಗೆ ನಿಶ್ಚಲವಾದ ಒಂದು ಗುರಿಯಂತೂ ಬೇಕೇ ಬೇಕು. ಇಲ್ಲವಾದಲ್ಲಿ ಆದರೆ ಆಯಿತು, ಹೋದರೆ ಹೋಯಿತು ಎಂಬ ಮನೋಭಾವ ಬದುಕಿನ ಪಲ್ಲಂಗವನ್ನೇ ಬದಲಿಸಬಹುದು. ಅಷ್ಟಕ್ಕೂ ಮತ್ತೆ ಬರುವ ಉತ್ತರವೆಂದರೆ ದೇವರು ಹಾಗೇ ಬರೆದಿಟ್ಟಂತಹ ಬರೆಹವಾಗಿರಲೂಬಹುದು, ಅದನ್ನು ತಪ್ಪಿಸಲು ಯಾರ ಕೈಯಲ್ಲಿ ಸಾಧ್ಯ ಎಂಬ ಮಾತೂ ಗಾಳಿಯಂತೆ ಅತ್ತಿತ್ತ ಹಾರಾಡಬಹುದು.

ಒಟ್ಟಿನಲ್ಲಿ ಬದುಕೆಂದರೆ ಕತ್ತಲು ಮುಗಿದು ಸೂರ್ಯೋದಯವಾಗಿ ಹೊಸದಿನ ಮೂಡುವಂತೆ ಮನಸ್ಸು ಹೊಸತನದಿಂದ ಗೆಲುವಿನ ಹಾದಿಯನ್ನು ಹಿಡಿಯುವ ಹೊಸ ಶೀರ್ಷಿಕೆಯೆನ್ನಬಹುದು. ಅದಕ್ಕೆ ತಿರುಳಿನ ರಸಭರಿತ ಸಾರವನ್ನು ಅವರವರೇ ತುಂಬಿಸಿಕೊಂಡರಾಯಿತು. ದಿನ ಕರಗುತ್ತಲೇ ಚಿಂತನೆಗೆ ಮನ ಮಾಡಿದಾಗ ಬದುಕಿನ ದಾರಿಯ ಒಳ ಸುಳಿವು ದೊರಕಲಾರಂಭಿಸುತ್ತದೆ. ಮಾಡಿದ ಕಾರ್ಯಗಳ ವಿಸ್ತ್ರತ ರೂಪ ಆಗ ದೊರಕುತ್ತದೆ. ಹೀಗೆ ಮಾಡಬೇಕಿತ್ತು, ಇದು ಹಾಗಾಗಬೇಕಿತ್ತು ಎಂಬ ಅನಿಸಿಕೆಗಳು ಯೋಚನೆಗಳನ್ನು ಮತ್ತಷ್ಟೂ ಎಳೆ ಎಳೆಯಾಗಿ ಸೂಕ್ಷ್ಮತೆಯೆಡೆಗೆ ಸೆಳೆಯುತ್ತದೆ. ಆಗ ಬದುಕಿನಲ್ಲಿ ನಡೆದ ಅಥವಾ ಮಾಡಿದ ತಪ್ಪುಗಳನ್ನು ಸ್ವತಃ ಪ್ರಮಾಣೀಕರಿಸಿಕೊಂಡು ಮುನ್ನಡೆಯಲು ಸಾಕಷ್ಟು ಸುದೃಢ ದಾರಿಗಳು ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮುಖ್ಯವಾಗಿ ಚಿಂತನೆಯ ಸ್ವಾರ್ಥವಿರದ ಮನ ಇರಲೇಬೇಕು. ಬದುಕು ಬಂಗಾರವಾಗಲು ಆ ಮನಸ್ಸು ಸದಾ ಕಾವಲಿರಬೇಕು‌.

ಬೆಳ್ಳಂಬೆಳಗ್ಗೆಯೇ ದುಗುಡ ಪ್ರಕೃತಿ ನಲಿಯಲು ಹಾತೊರೆದರೂ ರವಿಗಿಲ್ಲ ಒಲವು. ಅಲ್ಲದೇ ಮೋಡಗಳ ತಗಾದೆ ಬೇರೆ. ಹೀಗಿರುವಾಗ ಹಾಗೇ ಸುಮ್ಮನೆ ನವಿಲೊಂದು ಕುಣಿಯುತ್ತಿತ್ತು ತನ್ನ ಪಾಡಿಗೆ ತಾನು. ಯಾರಿಗೂ ತೊಂದರೆಯಾಗದಂತೆ. ಸುತ್ತಲಿದ್ದ ನಾಯಿಗಳ ಊಳಿಡುವಿಕೆ ಹತ್ತೂರಿಗೂ ಹಬ್ಬಿತ್ತು. ಅದು ಗೊತ್ತಾದ ಬಳಿಕ ನವಿಲು ಸುಖಾಸುಮ್ಮನೇ ನಲಿಯುವುದೆಂತು. ಅಲ್ಲೇ ಇದ್ದ ಮರದ ಮೇಲೆ ಹಾರಿ ಸುಮ್ಮನೇ ಕುಳಿತುಕೊಂಡಿತು. ಪ್ರಸ್ತುತ ಈ ಸ್ಥಿತಿ ಎಲ್ಲರಿಗೂ ಅನ್ವಯವಾಗಲಿದೆ. ಸಮಾಜದ ಏರುಪೇರುಗಳಿಗೆ ಕಾರಣಕರ್ತರಾದರೂ ಒಳಿತಿನ ದಾರಿಯಲ್ಲಿ ಮುನ್ನಡೆಯಬೇಕಾಗಿದೆ. ದಿನಗಳು ಹೀಗೇ ಇರುವುದಿಲ್ಲ ಅಲ್ಲದೇ ಒಂದೇ ತೆರನಾಗಿರುವುದಿಲ್ಲ. ಸಂಭಾಳಿಸಿಕೊಂಡು ಹೋಗುವುದರಲ್ಲಿದೆ ಜಾಣ್ಮೆ. ಅದು ಬಿಟ್ಟು ಕಡ್ಡಿ ಮುರಿದಂತೆ ಆಗಲೇಬೇಕೆಂಬ ಹಠ ಯಾವಾಗಲೂ ಒಳ್ಳೆಯದಾಗದು. ಬದುಕಿನ ಜಾಣ್ಮೆ ಮನದ ಅಂಗಳದೊಳಗಿದೆ. ಅದನ್ನು ದಿನವೂ ಸ್ವಚ್ಛವಿರಿಸಿಕೊಂಡರಾಯಿತು. ಆಗ ದಾರಿ ತಾನಾಗೇ ಹೊಳೆಯತೊಡಗುತ್ತದೆ. ಕ್ಷಣದೊಳಗೆ ಯೋಚನೆಗೆ ನಿಲುಕಲಾರದ ಪರಿಸ್ಥಿತಿ ಬಂದೇಬಿಡುತ್ತದೆ. ದೇವರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಮುನ್ನಡೆದರಾಯಿತು. ಜೀವನದಲ್ಲಿ ಒದಗುವ ಒಂದು ಕ್ಷಣವೂ ನಮ್ಮದಲ್ಲ!
ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು ದ.ಕ
ಅಂಕಣಕಾರರು, ಕವಯಿತ್ರಿ

- Advertisement -

Related news

error: Content is protected !!