




ಮಂಗಳೂರು: 2018ರಲ್ಲಿ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಪ್ರದೇಶದಲ್ಲಿರುವ “ಪೂಜಾ ಮೊಬೈಲ್ಸ್” ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 06 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ನಡೆದ ಕಳವು ಪ್ರಕರಣದಲ್ಲಿ ಅಂಗಡಿಯಿಂದ ಸುಮಾರು ₹2,17,740 ಮೌಲ್ಯದ ಮೊಬೈಲ್ ಫೋನ್‌ಗಳು, ಬಿಡಿಭಾಗಗಳು, ಸಿಸಿಟಿವಿ ಡಿವಿಆರ್ ಹಾಗೂ ₹2,100 ನಗದು ಹಣ ಕಳವಾಗಿದ್ದು, ಜೊತೆಗೆ ₹10,000 ಮೌಲ್ಯದ ಎರಡು ಕಂಪ್ಯೂಟರ್ ಮಾನಿಟರ್‌ಗಳನ್ನು ಒಡೆದು ನಷ್ಟ ಉಂಟು ಮಾಡಲಾಗಿತ್ತು. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ.152/2018 ಕಲಂ 427, 457 ಹಾಗೂ 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳಲ್ಲೊಬ್ಬನಾದ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ (34) ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಸಿಲ್ಚಾರ್‌ನ ಲಕ್ಕಿಪುರ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಆರೋಪಿತನ ವಿರುದ್ಧ ದಸ್ತಗಿರಿ ವಾರಂಟ್ ಜಾರಿಗೊಳಿಸಿತ್ತು.
ಮೇಲಾಧಿಕಾರಿಗಳ ನಿರ್ದೇಶನದಂತೆ, ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ ಠಾಣೆಯ ಸಿಹೆಚ್‌ಸಿಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್ ಹಾಗೂ ಸಿಪಿಸಿಗಳಾದ ರಾಕೇಶ್ ಮತ್ತು ವಿನಯ್ ಅವರ ತಂಡವು ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರ ಸಮೀಪ ಪತ್ತೆಹಚ್ಚಿ ಮೇ 11, 2026ರಂದು ಬಂಧಿಸಿದೆ.
ಬಂಧಿತ ಆರೋಪಿಯನ್ನು ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








