ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಗುರುತಿಸುವ ನಿಟ್ಟಿನಲ್ಲಿ ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದ ಮಾದರಿಯಲ್ಲಿ ಕಬಕ ಪುತ್ತೂರು ಆದರ್ಶ ರೈಲು ನಿಲ್ದಾಣದಲ್ಲಿ ಮಹಾಲಿಂಗೇಶ್ವರ ದೇವರ ಬೃಹತ್ ಫೋಟೋ ಮತ್ತು ನಾಮಫಲಕ ಅಳವಡಿಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಕಬಕ ಪುತ್ತೂರು ಆದರ್ಶ ರೈಲ್ವೇ ನಿಲ್ದಾಣದಲ್ಲಿ ಜು.11ರಂದು ಮಂಗಳೂರು-ಯಶವಂತಪುರ ವಿಸ್ಟಾಡೋಮ್ ಹಗಲು ರೈಲನ್ನು ಸ್ವಾಗತಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿ ರೈಲ್ವೇ ನಿಲ್ದಾಣದ ಹೊರ ಭಾಗದಲ್ಲಿ ಪುತ್ತೂರಿನ ಪ್ರವಾಸಿ ಸ್ಥಳಗಳಾದ ಬೆಂದ್ರ್‌ತೀರ್ಥ, ಡಾ. ಶಿವರಾಮ ಕಾರಂತರ ಬಾಲವನ, ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ಕೋಟಿ ಚೆನ್ನಯರ ಪಡುಮಲೆ, ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕುರಿತು ಮಾಹಿತಿಗಳುಳ್ಳ ಫಲಕವನ್ನು ಕೂಡಾ ಅಳವಡಿಸಲಾಗುವುದು. ರೈಲ್ವೇ ಇಲಾಖೆಯ ಅನುಮತಿಯೊಂದಿಗೆ ಈ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.

ಪುತ್ತೂರಿನ ಜನತೆಯ ಪ್ರಮುಖ ಬೇಡಿಕೆಯಾದ ಎಪಿಎಂಸಿ ರಸ್ತೆಯಲ್ಲಿನ ಅಂಡರ್‌ಪಾಸ್ ರಚಿಸುವ ಕುರಿತಂತೆ ಈಗಾಗಲೇ ನೈರುತ್ಯ ರೈಲ್ವೇ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆದಿದೆ. ರಾಜ್ಯ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ರೂ.11 ಕೋಟಿ ಅನುದಾನ ಮಂಜೂರಾಗಿದೆ. ಕಬಕ ಪುತ್ತೂರು ರೈಲ್ವೇ ನಿಲ್ದಾಣದಿಂದ ಶ್ರೀಲಕ್ಷ್ಮೀ ದೇವಿ ಬೆಟ್ಟಕ್ಕೆ ಸಂಪರ್ಕ ರಸ್ತೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಕಬಕ ಪುತ್ತೂರು ರೈಲ್ವೇ ನಿಲ್ದಾಣ ಸಂಪರ್ಕದ ಹಾರಾಡಿ ರೈಲ್ವೇ ರಸ್ತೆಯನ್ನು ರೂ. 1.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನೆಗೆ ಈಗಾಗಲೇ ಅಂದಾಜುಪಟ್ಟಿ ಸಿದ್ದವಾಗಿದೆ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಲ್ಲಿ ರೈಲ್ವೇ ಸಚಿವರಲ್ಲಿ ಈ ಬಗ್ಗೆ ಮಾತುಕತೆ ನಡೆಸಿ ಯೋಜನೆಗೆ ಅಂತಿಮ ಮಂಜೂರಾತಿ ಹಾಗೂ ಅನುದಾನವನ್ನು ಪಡೆಯಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮತ್ತಿತರರು ಉಪಸ್ಥಿತರಿದ್ದರು.










