Tuesday, April 23, 2024
spot_imgspot_img
spot_imgspot_img

ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ಅಂಕಪಟ್ಟಿ ಆಧಾರಿತ ಶಿಕ್ಷಣ ಇನ್ನಿರಲ್ಲ- ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ʼ21 ನೇ ಶತಮಾನದಲ್ಲಿ ಶಾಲಾ ಶಿಕ್ಷಣʼ ಕುರಿತ ಶಿಕ್ಷಾ ಪರ್ವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗವನ್ನು ಚಿಗುರುವಂತೆ ಮಾಡುವ ಬೀಜಗಳಾಗಲಿವೆ. 21 ನೇ ಶತಮಾನದ ಭಾರತಕ್ಕೆ ಹೊಸ ದೃಷ್ಟಿ ನೀಡುವ ಕೆಲಸವನ್ನು ಇದು ಮಾಡಲಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಕಾರ್ಯ ಈಗಷ್ಟೇ ಆರಂಭವಾಗಿದೆ. ಈ ಹೊಸ ಶಿಕ್ಷಣ ನೀತಿಯನ್ನು ಸರಿಯಾದ ರೀತಿಯಲ್ಲಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯವು 15 ಲಕ್ಷಗಳಿಗೂ ಅಧಿಕ ಸಲಹೆ, ಸೂಚನೆಗಳನ್ನು ಸ್ವೀಕರಿಸಿರುವುದಾಗಿ ಪ್ರಧಾನಿ ಹೇಳಿದ್ದಾರೆ.

ಈ ನೀತಿಯು ಕಳೆದ ಮೂರು ದಶಕಗಳಿಂದೀಚೆಗೆ ಬದಲಾಗದೆ ಉಳಿದ ಶಿಕ್ಷಣ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವಲ್ಲಿ ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಳನ್ನು ನಾಲ್ಕು ಗೋಡೆಯ ನಡುವಿನ ಪಠ್ಯಕ್ಕಷ್ಟೇ ಸೀಮಿತ ಮಾಡಬಾರದು. ಅವರಿಗೆ ಅದರ ಹೊರತಾಗಿಯೂ ಕಲಿಕೆಗೆ, ಜ್ಞಾನ ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಈ ನೀತಿ ಮಹತ್ವ ಪಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಶ್ನಿಸುವ, ಆ ಮೂಲಕ ಸ್ವತಂತ್ರ ಕಲಿಕೆಗೆ ಪೂರಕವಾಗುವ ವಾತಾವರಣವನ್ನು ಇದು ನಿರ್ಮಾಣ ಮಾಡಲಿದೆ. ಮಕ್ಕಳಲ್ಲಿ ಪ್ರಾಯೋಗಿಕವಾಗಿ ಕಲಿಯುವ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ನೂತನ ನೀತಿಯಲ್ಲಿ ವೃತ್ತಿಪರ ತರಬೇತಿಗೂ ಅವಕಾಶ ಇದ್ದು, ಇದು ಮಕ್ಕಳನ್ನು ಸಂವೇದನಾಶೀಲ‌ರನ್ನಾಗಿಸುವುದೆಂದೂ ಅವರು ತಿಳಿಸಿದ್ದಾರೆ.

ಈ ಹೊಸ ಶಿಕ್ಷಣ ನೀತಿಯು 2022 ವೇಳೆಗೆ ಹೊಸ ರೀತಿಯ ಕಲಿಕಾ ಕ್ರಮಕ್ಕೆ ತೆರೆದುಕೊಳ್ಳಲಿದೆ. ಪಠ್ಯದ ಜೊತೆಗೆ ಅಷ್ಟೇ ಮಹತ್ವದ ವಿಚಾರವಾಗಿ ಪಠ್ಯೇತರ ಕಲಿಕೆಗೂ ಇಲ್ಲಿ ಅವಕಾಶ ನಿರ್ಮಾಣವಾಗಲಿದೆ. ಅಂತ ಚೌಕಟ್ಟನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ. ಭವಿಷ್ಯದಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಂವಹನ ಮತ್ತು ಕುತೂಹಲ ಸೇರಿದಂತೆ ಹೊಸ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಕರಗತವಾಗಲು ಇದು ದಾರಿಯಾಗುತ್ತದೆ. ಜೊತೆಗೆ ಅಂಕ ಆಧಾರಿತ ಶಿಕ್ಷಣ ಕ್ರಮದಿಂದ ಕಲಿಕೆ ಆಧಾರಿತ ಶಿಕ್ಷಣ ಕ್ರಮದತ್ತ ಮಹತ್ವದ ಬದಲಾವಣೆಯನ್ನು ಪಡೆದುಕೊಳ್ಳಲಿರುವುದಾಗಿ ಮೋದಿ ಮಾಹಿತಿ ನೀಡಿದ್ದಾರೆ.

ಶಿಕ್ಷಣದ ಒತ್ತಡದಿಂದ ಮಕ್ಕಳನ್ನು ಮುಕ್ತಗೊಳಿಸುವುದು NEPಯ ಪ್ರಮುಖ ಉದ್ದೇಶ. ಹೊಸ ಶಿಕ್ಷಣ ನೀತಿಯಲ್ಲಿ 5 ನೇ ತರಗತಿ ವರೆಗಿನ ಶಿಕ್ಷಣ ಮಾತೃಭಾಷೆ‌ಯಲ್ಲಿ ಪಡೆಯಲು ಅವಕಾಶ ನೀಡಲಾಗಿದೆ. ಏಕೆಂದರೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂ ಅಧ್ಯಯನ ನಡೆಸುವ ಸಮಯವಲ್ಲ. ಆದ್ದರಿಂದ ಶಿಕ್ಷಕರು ಏನು ಹೇಳುತ್ತಾರೋ, ಅಂತಹ ವಿಚಾರಗಳು ಅವರಿಗೆ ಸರಿಯಾದ ರೀತಿಯಲ್ಲಿ ಮನಮುಟ್ಟುವಂತೆ ಇರಬೇಕು. ಇದು ಅವರಿಗೆ ಪರಿಚಿತವಿರುವ ಭಾಷೆಯ ಮೂಲಕವೇ ಸಾಧ್ಯವಾಗಿಸಿದರೆ ಅವರಿಗೆ ವಿಷಯ ಅರ್ಥ ಮಾಡಿಕೊಳ್ಳಲು ಹೆಚ್ಚು ಅನುಕೂಲ ಆಗಲಿದೆ. ಬಹಳಷ್ಟು ದೇಶಗಳಲ್ಲಿ ಇದೇ ಪದ್ದತಿ ಜಾರಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಪೋಷಕರು ಮಕ್ಕಳ ಕಲಿಕೆಯ ಜೊತೆಗೆ ಸಂಬಂಧ ಹೊಂದುವ ನಿಟ್ಟಿನಲ್ಲಿಯೂ ಇದು ಅವಶ್ಯಕ. ಮಾತೃಭಾಷಾ ಶಿಕ್ಷಣದ ಜೊತೆಗೆ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಶಿಕ್ಷಣಕ್ಕೂ ಉತ್ತೇಜನ ನೀಡಲಾಗುತ್ತದೆ ಎಂದು ನಮೋ ತಿಳಿಸಿದ್ದಾರೆ.

ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ 2022 ರ ವೇಳೆಗೆ ಭಾರತದಲ್ಲಿ ಒಂದು ಶಿಕ್ಷಣ ಕ್ರಾಂತಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಈ ರಾಷ್ಟ್ರೀಯ ಮಿಷನ್‌ಗೆ ಕೈ ಜೋಡಿಸುವಂತೆ ಮೋದಿ ಮನವಿ ಮಾಡಿದರು. ಹೊಸ ಶಿಕ್ಷಣ ನೀತಿಯ ಕಾರಣದಿಂದ ವಿದ್ಯಾರ್ಥಿ‌ಯ ಜ್ಞಾನ ವಿಕಾಸವಾಗಲಿದ್ದು, ನಿಮ್ಮೆಲ್ಲರ ಸಹಕಾರದ ಜೊತೆಗೆ ಕೇಂದ್ರ ಸರ್ಕಾರ ಈ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!