Tuesday, July 21, 2026
spot_imgspot_img
spot_imgspot_img

ನೆಲ್ಯಾಡಿ: ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯ ಮೇಲೆ ಕಾಡುಹಂದಿ ದಾಳಿ – ತೀವ್ರ ಗಾಯ

- Advertisement -
- Advertisement -

ನೆಲ್ಯಾಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪೊಟ್ಟುಕೆರೆ ಪ್ರದೇಶದಲ್ಲಿ ಡಿ.20ರಂದು ಬೆಳಗ್ಗೆ ಕಾಡುಹಂದಿಯೊಂದು ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.


ಗಾಯಗೊಂಡ ಮಹಿಳೆಯನ್ನು ಕೌಕ್ರಾಡಿ ಗ್ರಾಮದ ಪೊಟ್ಟುಕೆರೆ ನಿವಾಸಿ ಉಮೇಶ್ ಗೌಡರ ಪತ್ನಿ ಲೀಲಾವತಿ (36) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ತಮ್ಮ ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವ ವೇಳೆ ಅರಣ್ಯ ಪ್ರದೇಶದಿಂದ ಬಂದ ಕಾಡುಹಂದಿಯು ಹಠಾತ್ ದಾಳಿ ನಡೆಸಿದ್ದು, ಮಹಿಳೆಯ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿವೆ.


ಗಾಯಗೊಂಡ ಲೀಲಾವತಿಯನ್ನು ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯಲ್ಲಿ ಮುಂದುವರಿದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಕಡಬ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಕಾಡಾನೆ, ಕಾಡುಹಂದಿ ಸೇರಿದಂತೆ ಇತರ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತೋಟ, ಕೃಷಿಭೂಮಿ ಹಾಗೂ ಮನೆಗಳ ಸಮೀಪಕ್ಕೂ ಕಾಡುಪ್ರಾಣಿಗಳು ನುಗ್ಗುತ್ತಿರುವುದರಿಂದ ರೈತರು ಹಾಗೂ ಮಹಿಳೆಯರು ದಿನನಿತ್ಯದ ಕೆಲಸಕ್ಕೂ ಭಯಭೀತಿಯಿಂದ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಕಾಡುಪ್ರಾಣಿಗಳ ದಾಳಿಯಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದ್ದು, ಸಾರ್ವಜನಿಕರ ಪ್ರಾಣಾಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯ ಭದ್ರತಾ ವ್ಯವಸ್ಥೆಗಳೊಂದಿಗೆ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಯೋಜನೆ ಜಾರಿಗೆ ತರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಉಪ್ಪಿನಂಗಡಿ ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!