ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣದ ಮನೆಯೊಂದರಲ್ಲಿ ಮಂಗಳವಾರ ಮಧ್ಯ ರಾತ್ರಿ ವೇಳೆಗೆ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಳಗಿನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾಗಿದೆ.

ಇಸ್ಮಾಯಿಲ್ ಎಂಬವರಿಗೆ ಸೇರಿದ ವಸತಿ ಸಂಕೀರ್ಣ ಇದಾಗಿದ್ದು, ಉದ್ಯಮಿ ಹನೀಫ್ ಹಾಸ್ಕೋ ಅವರ ಕುಟುಂಬ ವಾಸ್ತವ್ಯ ಹೊಂದಿರುವ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆ ಮಂದಿ ಸಂಬಂಧಿಕರ ಮರಣ ಸಂಭವಿಸಿದ ಹಿನ್ನಲೆಯಲ್ಲಿ ತೆರಳಿದ್ದ ವೇಳೆ ಈ ಅಗ್ನಿ ಅವಘಡ ಸಂಭವಿಸಿದ್ದು, ಜೀವ ಹಾನಿಯಂತಹ ಹೆಚ್ಚಿನ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.


ಮನೆಯೊಳಗೆ ಬೆಂಕಿ ಜ್ವಾಲೆ ಕಂಡು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಸ್ಥಳಕ್ಕಾಗಮಿಸಿದ ಹನೀಫ್ ಅವರು ಬೆಂಕಿಯ ಜ್ವಾಲೆ ಖಚಿತಪಡಿಸಿ ತಕ್ಷಣ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾದರೂ ಅದಾಗಲೇ ಮನೆಯೊಳಗಿನ ಸೊತ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.


ಮನೆಯೊಳಗಿನ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸಹಿತ ಕಪಾಟಿನೊಳಗಿದ್ದ ವಸ್ತ್ರ, ಬಟ್ಟೆ-ರೆಗಳು, ಚಿನ್ನಾಭರಣಗಳು ಹಾಗೂ ನಗದು ಹಣ ಕೂಡಾ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕರಟಿದ ಮಸಿಯಂತಾಗಿದೆ.

ಮಂಗಳವಾರ ಸಂಜೆ ತನ್ನ ಉದ್ಯಮದ ಲೈನ್ ಮುಗಿಸಿ ಬಂದ ಹನೀಫ್ ಸುಮಾರು 50 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಕಪಾಟಿನಲ್ಲೇ ಇಟ್ಟಿದ್ದರು ಎನ್ನಲಾಗಿದ್ದು ಅದೆಲ್ಲವೂ ಸುಟ್ಟು ಭಸ್ಮವಾಗಿದೆ. ಸುಮಾರು 20 ಪವನ್ ಗೂ ಅಧಿಕ ಚಿನ್ನಾಭರಣಗಳು ಇದ್ದು, ಅದೂ ಕೂಡಾ ಗುರುತು ಹಿಡಿಯಲಾರದಷ್ಟು ಕರಟಿ ಹೋಗಿದೆ.

ಹನೀಫ್ ಅವರ ವಾಹನದ ಸಹಿತ ಇತರ ಅತ್ಯಮೂಲ್ಯ ದಾಖಲೆಗಳೂ ಕೂಡಾ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ಹಠಾತ್ ಸಂಭವಿಸಿದ ಈ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ನಿಖರ ನಷ್ಟ ತಿಳಿದುಬರಬೇಕಷ್ಟೆ.










